ಕೆಲವು ದೇಶದ್ರೋಹಿ ಪಕ್ಷಗಳು ಗೋಡ್ಸೆಯನ್ನು ಒಳ್ಳೆಯ ವ್ಯಕ್ತಿಯೆಂಬಂತೆ ಬಿಂಬಿಸುತ್ತಿವೆ : ಮನೋಹರ್

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯಂತಹ ಭಯೋತ್ಪಾದಕರನ್ನು ಇಂದಿಗೂ ಕೆಲವು ದೇಶದ್ರೋಹಿ ಪಕ್ಷಗಳು ಒಳ್ಳೆಯ ವ್ಯಕ್ತಿಯೆಂಬಂತೆ ಬಿಂಬಿಸುತ್ತಿವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ದೂರಿದ್ದಾರೆ.
ಗುರುವಾರ ರೇಸ್‍ಕೋರ್ಸ್ ರಸ್ತೆಯಲ್ಲಿ ಹುತಾತ್ಮ ದಿನಾಚರಣೆಯ ಅಂಗವಾಗಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಗಾಂಧಿ ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಇಡೀ ವಿಶ್ವವೇ ಭಾರತದ ಶಾಂತಿಪಾಲ ಮಾರ್ಗವನ್ನು ಪಾಲಿಸುತ್ತಿದೆ. ದೇಶದ ಸಂವಿಧಾನವನ್ನು ವಿಶ್ವದ ಅನೇಕ ರಾಷ್ಟ್ರಗಳು ಮೈಗೂಡಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಗಾಂಧಿಜಿಯವರನ್ನು, ಡಾ.ಅಂಬೇಡ್ಕರನ್ನು ಅವಮಾನಿಸುವ ನಾಯಕರು ಬಿಜೆಪಿಯಲ್ಲಿ ಹೆಚ್ಚಾಗಿದ್ದಾರೆ ಎಂದರು.
ಸ್ವಾತಂತ್ರ್ಯಕ್ಕಾಗಿ ಇಡೀ ದೇಶದ ಉದ್ದಗಲಕ್ಕೂ ಎಲ್ಲರನ್ನೂ ಒಗ್ಗೂಡಿಸಿ, ಭಾರತದ ಒಳಿತಿಗಾಗಿ ಶ್ರಮಿಸಿದ ಮಹಾನಾಯಕರ ಕೊಡುಗೆಯನ್ನು ನಾವೆಲ್ಲರೂ ನಿತ್ಯವು ಸ್ಮರಿಸುತ್ತಾ, ಗಾಂಧೀಜಿ ತತ್ವ ಸಿದ್ಧಾಂತ ಹಾಗೂ ಶಾಂತಿ ಪಾಲನೆಯ ಅಹಿಂಸ ಮಾರ್ಗದಲ್ಲಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ. ಗಾಂಧಿ ಭಾರತದ ನಿರ್ಮಾಣದಲ್ಲಿ ಸಾಗಲು ನಾವೆಲ್ಲರೂ ಪಣ ತೋಡೋಣ ಎಂದು ಮನೋಹರ್ ಕರೆ ನೀಡಿದರು.
ಈ ವೇಳೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಹೇಮರಾಜು, ಪ್ರಕಾಶ್, ಚಂದ್ರಶೇಖರ್, ಸುಂಕದಕಟ್ಟೆ ನವೀನ್, ನವೀನ್ ಸಾಯಿ, ಕುಶಾಲ್ ಹರುವೇಗೌಡ, ವಿ ರವಿಕುಮಾರ್, ಉಮೇಶ್ ಸೇರಿರಂತೆ ಹಲವರು ಭಾಗವಹಿಸಿದ್ದರು.







