ಆಗ್ನೇಯ ಪದವೀಧರ ಕ್ಷೇತ್ರ; ಬಿಜೆಪಿಯ ಸುರೇಶ್ ಗೆ ಭರ್ಜರಿ ಜಯ
23,098 ಮತಗಳ ಅಂತರದಲ್ಲಿ ಗೆಲುವು; 66,020 ಮತ ಪಡೆದ ಬಿಜೆಪಿ ಅಭ್ಯರ್ಥಿ

ಬೆಂಗಳೂರು: ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ (ಸೋಮೇಶ್ವರ) ಅವರು ಗೆಲುವಿನ ನಗೆ ಬೀರಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ 66,020 ಮತಗಳನ್ನು ಪಡೆದ ಅವರು, ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರನ್ನು 23,098 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಅಕ್ಟೋಬರ್ 28ರಂದು ಪ್ರಕಟವಾದ ಸುತ್ತುವಾರು ಮತ ಎಣಿಕೆಯ ವಿವರಗಳ ಪ್ರಕಾರ, ಶಶಿ ಹುಲಿಕುಂಟೆಮಠ 42,922 ಮತಗಳನ್ನು ಪಡೆದಿದ್ದಾರೆ. ಎಲ್ಲ 10 ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡ ಸುರೇಶ್, ಅಂತಿಮವಾಗಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಇತರ ಅಭ್ಯರ್ಥಿಗಳ ಪೈಕಿ ಅಡ್ವೊಕೇಟ್ ಬರೀದ್ 1,107 ಮತಗಳನ್ನು ಪಡೆದಿದ್ದಾರೆ. ಶಶಿ ಹುಲಿಕಟ್ಟಿ 449, ಲಕ್ಷ್ಮಯ್ಯ ಆರ್. (ಆರ್.ಎಲ್.) 387, ಚಿಕ್ಕರಾಜು ಎಸ್. ಯಾದವ್ 377, ಲಕ್ಷ್ಮೀಕಾಂತ ಎಸ್. ಯಾದವ್ 369, ಜಿ.ಸಿ. ಪಟೇಲ್ 162, ಕಾಪನಿಗೌಡ 156 ಮತ್ತು ಸೈಯದ್ ಅಫಾಕ್ ಅಹಮದ್ 113 ಮತಗಳನ್ನು ಗಳಿಸಿದ್ದಾರೆ.
ಒಟ್ಟು 1,32,138 ಮತಗಳು ಎಣಿಕೆಯಾಗಿದ್ದು, 1,12,062 ಮತಗಳು ಮಾನ್ಯವಾಗಿವೆ. 20,076 ಮತಗಳು ತಿರಸ್ಕೃತಗೊಂಡಿವೆ.
ಕೊನೆಯ ಸುತ್ತಿನಲ್ಲಿ ಸುರೇಶ್ 3,515 ಮತಗಳನ್ನು ಪಡೆದರೆ, ಶಶಿ ಹುಲಿಕುಂಟೆಮಠ 1,720 ಮತಗಳನ್ನು ಗಳಿಸಿದ್ದಾರೆ.
ಕೆ.ಎಂ.ಸುರೇಶ್ ಪರಿಚಯ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ದೂಡಾ) ಮಾಜಿ ಅಧ್ಯಕ್ಷರೂ ಆಗಿರುವ ಕೆ.ಎಂ.ಸುರೇಶ್ ಅವರು, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣಾ ಸಂಘಟನೆಯಲ್ಲಿ ಮೂರು ದಶಕಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದರು.
1971ರಲ್ಲಿ ಜನಿಸಿರುವ ಕೆ.ಎಂ.ಸುರೇಶ್ ಎಂ.ಎ. (ಸಮಾಜಶಾಸ್ತ್ರ) ಹಾಗೂ ಎಂ.ಫಿಲ್ ಪದವೀಧರರಾಗಿದ್ದಾರೆ. 1994-95ರಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಇವರು, ಪಕ್ಷದ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಸಮಿತಿಯ ಕೋಶಾಧ್ಯಕ್ಷ, ರಾಜ್ಯ ಶಿಕ್ಷಕರ ಪ್ರಕೋಷ್ಟದ ಸಹ ಸಂಚಾಲಕ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 2023ರ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಶಿಕ್ಷಣ, ಸಾಮಾಜಿಕ ಕ್ಷೇತ್ರ:
2004ರಲ್ಲಿ ದಾವಣಗೆರೆಯಲ್ಲಿ ‘ಶ್ರೀ ಸೋಮೇಶ್ವರ ವಿದ್ಯಾಲಯ’ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಇವರು, ಪ್ರಸಕ್ತ ಸೋಮೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ವಸತಿ ಶಾಲೆ, ಪದವಿ ಪೂರ್ವ ಕಾಲೇಜು, ಸೋಮೇಶ್ವರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನ ಎಸ್.ಜೆ.ಆರ್. ಶಿಕ್ಷಣ ಸಂಸ್ಥೆಯ ಹಾಲಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.






