ಮಾಧ್ಯಮಗಳು ಜನರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ದೇಶವನ್ನು ಬಲಿಷ್ಠಗೊಳಿಸುವಲ್ಲಿ ಮಾಧ್ಯಮ ಕ್ಷೇತ್ರದ ಕೊಡುಗೆ ಪ್ರಮುಖವಾಗಿದೆ. ಅದೇ ರೀತಿ ಮಾಧ್ಯಮಗಳು ಜನರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಇವರ ಸಹಯೋಗದಲ್ಲಿ ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡಿದ್ದ ‘ಹೆಚ್ಚುತ್ತಿರುವ ಸುಳ್ಳು ಸುದ್ದಿಗಳ ನಡುವೆ ಮಾಧ್ಯಮಗಳ ವಿಶ್ವಾಸಾರ್ಹತೆಯ ರಕ್ಷಣೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶದ ಸಂಸ್ಕೃತಿ, ಸಾಹಿತ್ಯವನ್ನು ಎತ್ತಿ ಹಿಡಿಯುವಲ್ಲಿ ಮಾಧ್ಯಮ ಕ್ಷೇತ್ರವು ಮಹತ್ತರ ಪಾತ್ರ ವಹಿಸಿದೆ. ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ಕದಡುವ ಕೆಲಸ ಮಾಡದೇ, ಕಾಪಾಡುವಂತಹ ಕೆಲಸ ಮಾಡಬೇಕು. ಸುಳ್ಳು ಸುದ್ದಿಗಳನ್ನು ಹರಿಬಿಡದೆ ನಿಜ ಸ್ವರೂಪವಾದ ಸತ್ಯವಾದ ಸುದ್ದಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಾಮಾಜಿಕ ಬದಲಾವಣೆ ತರುವಂತಹ ಕೆಲಸ ಮಾಡಬೇಕು ಎಂದು ಖಾದರ್ ತಿಳಿಸಿದರು.
ಸುದ್ದಿಯು ಸುದ್ದಿಯ ರೂಪದಲ್ಲಿಯೇ ಇರಬೇಕು. ನೋಡುವುದೆಲ್ಲಾ ಸುದ್ದಿಯಾಗಬಾರದು. ರಾಜಕಾರಣ ಮತ್ತು ಮಾಧ್ಯಮವು ಸಮಾಜದ ಎರಡು ಕಣ್ಣುಗಳಿದ್ದಂತೆ. ಈ ಕಣ್ಣುಗಳಿಗೆ ಹಾನಿಯಾದಾಗ ಸಮಾಜ ಕತ್ತಲೆಗೆ ದೂಡುತ್ತದೆ. ವಿದ್ಯಾರ್ಥಿ ಜೀವನದಿಂದ ರಾಜಕಾರಣ ಜೀವನದವರೆಗೂ ನನ್ನ ಸಮಸ್ಯೆಗಳನ್ನು ಬಗೆಹರಿಸಲು ಪತ್ರಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ನುಡಿದರು.
ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ. ಮಾಧ್ಯಮಗಳು ಅಳಿವಿನಂಚಿಗೆ ಹೋಗುತ್ತಿವೆ. ಮಾಧ್ಯಮಗಳನ್ನು ಉಳಿಸುವ ಕಾರ್ಯ ನಡೆಸಬೇಕಿದೆ. ಸಾಮಾಜಿಕ ಮಾಧ್ಯಮಗಳು ವಸ್ತು ಸ್ಥಿತಿಯನ್ನು ಅರಿಯದೇ ತತ್‍ಕ್ಷಣ ಸುದ್ದಿಗಳನ್ನು ಬಿತ್ತರಿಸುತ್ತವೆ. ಸುದ್ದಿಗಳ ನೈಜತೆಯನ್ನು ಗಮನಿಸುವುದಿಲ್ಲ. ಇಂತಹ ಕೆಲಸಗಳಾಗಬಾರದು. ಮುದ್ರಣ ಮಾಧ್ಯಮವಿರಲಿ ವಿದ್ಯುನ್ಮಾನ ಮಾಧ್ಯಮಗಳಿರಲಿ ಯಾವುದೇ ಮಾಧ್ಯಮಗಳಿರಲಿ ಸುದ್ದಿಯ ನೈಜತೆಯನ್ನು ಅರಿಯಬೇಕು ಎಂದರು.
ಸಮಾಜದ ಶಾಂತಿಯನ್ನು ಕದಡುವ ಸುದ್ದಿಗಳನ್ನು ಬಿತ್ತರ ಮಾಡಬಾರದು. ಸತ್ಯವಾದ ಸುದ್ದಿಗಳನ್ನು ಪ್ರಕಟಿಸಿ ಜನತೆಯ ವಿಶ್ವಾಸವನ್ನು ಗಳಿಸಬೇಕು. ರಾಜಕಾರಣಿಗಳು ಮಾಧ್ಯಮಗಳು ಮಾಡುವ ಟೀಕೆ ಮತ್ತು ಟಿಪ್ಪಣಿಗಳನ್ನು ಸಮ ಚಿತ್ತದಿಂದ ಸ್ವೀಕರಿಸಬೇಕು. ಟೀಕೆಗಳು ಬಂದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಅರಿತು ಕೆಲಸ ಮಾಡುವಂತರಾಗಬೇಕು. ಅಭಿಪ್ರಾಯಗಳನ್ನು ಸಕರಾತ್ಮಕವಾಗಿ ಸ್ವೀಕರಿಸಬೇಕು ಎಂದು ಎಂದು ಖಾದರ್ ತಿಳಿಸಿದರು.
ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಯುವ ಪತ್ರಿಕೋದ್ಯಮಿಗಳೇ ಮುಂದಿನ ಮಾಧ್ಯಮದ ಭವಿಷ್ಯ. ಅವರು ತಮ್ಮ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಇಂದು ಸುಳ್ಳು ಸುದ್ದಿಗಳ ನಡುವೆ ಮಾಧ್ಯಮಗಳ ವಿಶ್ವಾಸಾರ್ಹತೆ ಕಳೆದು ಹೋಗುತ್ತಿದೆ. ಎಲ್ಲರ ವಿಶ್ವಾಸವನ್ನು ಗಳಿಸುವಂತೆ ರಕ್ಷಣೆ ಮಾಡಬೇಕು. ಸತ್ಯದ ಪರವಾಗಿ ನ್ಯಾಯದ ಪರವಾಗಿ ಕೆಲಸ ಮಾಡಬೇಕು. ಯಾರ ಒತ್ತಡಕ್ಕೂ ಮಣಿಯಬಾರದು. ನಿಜವಾದ, ಸತ್ಯವಾದ ಸುದ್ದಿಯನ್ನು ಜನರ ಮುಂದಿಡಲು ಹಿಂಜರಿಯಬಾರದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶಾದ್, ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕಾರ್ಯನಿರತ ಪತ್ರಕರ್ತ ಸಂಘದ ಶಿವಾನಂದ ತಗಡೂರು ಸೇರಿದಂತೆ ಹಲವರು ಭಾಗವಹಿಸಿದ್ದರು.







