ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳಲಿ : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ವಿದ್ಯಾರ್ಥಿಗಳು ಭವಿಷ್ಯದ ದಿನಗಳಲ್ಲಿ ದೇಶದ ಸಂಪತ್ತು ಆಗಬೇಕು. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸರ್ವರ ಪ್ರೀತಿಗೆ ಪಾತ್ರರಾಗಬೇಕು ಎಂದು ವಿಧಾನಸಭೆಯ ಸ್ವೀಕರ್ ಯು.ಟಿ.ಖಾದರ್ ಅವರು ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಬ್ಯಾರೀಸ್ ಸೌಹಾರ್ದ ಭವನದಲ್ಲಿ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ‘ವಾರ್ಷಿಕ ಪ್ರಶಸ್ತಿ ಸಮಾರಂಭ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಳ್ಮೆ, ಪ್ರೀತಿ, ವಿಶ್ವಾಸ, ಸೋದರತೆ ಮತ್ತು ಯಾರಾದರೂ ತಪ್ಪು ಮಾಡಿದರೆ ಅದನ್ನು ಕ್ಷಮಿಸುವಂತಹ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬುದ್ಧಿವಂತಿಕೆ, ಪ್ರತಿಭೆಯ ಜೊತೆಗೆ ತಾಳ್ಮೆ ಇದ್ದರೆ ನಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲರೂ ಚಿಕ್ಕ ವಯಸ್ಸಿನಿಂದಲೇ ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕು. ತೊಂದರೆ ಕೊಟ್ಟವರನ್ನೂ ಕ್ಷಮಿಸಿ, ಮುಂದೆ ಹೋಗಬೇಕು. ಇದೇ ನಮ್ಮ ಶಕ್ತಿಯಾಗುತ್ತದೆ ಎಂದು ಖಾದರ್ ಅವರು ವಿವರಿಸಿದರು.
ಬಡತನದಲ್ಲಿ ಹುಟ್ಟಬಹುದು, ಆದರೆ ಬಡತನದಲ್ಲಿ ಸಾಯಬಾರದು. ಕಡು ಬಡತನವನ್ನು ದೂರ ಮಾಡಿ, ನಿಮ್ಮ ತಂದೆ-ತಾಯಿಗೆ ನೆಮ್ಮದಿಯ ಜೀವನವನ್ನು ಹಾಗೂ ನಿಮಗೆ ಸ್ವಾಭಿಮಾನದ ಬದುಕನ್ನು ಶಿಕ್ಷಣ ಮಾತ್ರ ನೀಡುತ್ತದೆ. ಒಳ್ಳೆಯ ರೀತಿ ಬದುಕಲು ಶಿಕ್ಷಣ ದಾರಿ ಮಾಡಿಕೊಡುತ್ತದೆ. ಈಗ ಶಿಕ್ಷಣದ ಬಗ್ಗೆ ಜನರಿಗೆ ಜಾಗೃತಿ ಇದೆ. ಬಡವರು, ನಿರ್ಗತಿಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎಂದು ಬಯಸುತ್ತಿದ್ದಾರೆ. ಅಲ್ಲದೆ, ಸರಕಾರ ಎಲ್ಲರಿಗೂ ಶಿಕ್ಷಣವನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಸಾಮರಸ್ಯ ಇರುವ ಕಡೆ ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೆಲವರು ಸಮಾಜವನ್ನು ವಿಭಜಿಸಿದರೆ, ನಾವು ಸಮಾಜವನ್ನು ಒಗ್ಗೂಡಿಸಬೇಕು. ಸಮಾಜದಲ್ಲಿ ಸಾಮರಸ್ಯವನ್ನು ಉಂಟು ಮಾಡಬೇಕಾದರೆ ಸರಕಾರ ಮತ್ತು ಜನ ಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ, ಪ್ರತಿಯೊಬ್ಬರು ಸಾಮರಸ್ಯಕ್ಕಾಗಿ ಕೈ ಜೋಡಿಸಬೇಕು. ಬಿನ್ನಾಭಿಪ್ರಾಯ ಇದ್ದರೂ, ಸಕಾರತ್ಮಕವಾಗಿ ಚರ್ಚೆ ಮಾಡಿ, ನಾವೆಲ್ಲ ಭಾರತೀಯರು ಎಂದು ಮುಂದೆ ಸಾಗುವುದೇ ನಿಜವಾದ ಸಾಮರಸ್ಯವಾಗಿದೆ ಎಂದು ಅವರು ಹೇಳಿದರು.
ನನ್ನ ಕ್ಷೇತ್ರದಲ್ಲಿ ಯಾವಾಗಲೂ ಒಂದು ಸಂದೇಶವನ್ನು ನೀಡುತ್ತೇನೆ. ನನ್ನ ಮೊದಲ ಕೆಲಸವೇ ಸಾಮರಸ್ಯ ಮತ್ತು ಸೌಹಾರ್ದ ಸಮಾಜ ನಿರ್ಮಾಣ ಮಾಡುವುದು. ಅದಕ್ಕಾಗಿ ಯಾವುದೇ ತ್ಯಾಗಕ್ಕೂ, ಯಾವುದೇ ಟೀಕೆಗೂ ನಾನು ಸಿದ್ದವಾಗಿದ್ದೇನೆ. ಉಳ್ಳಾಲಪೇಟೆಯ ಮುಖ್ಯರಸ್ತೆಯಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ದಲಿತ, ಶ್ರೀಮಂತರು, ಬಡವರ ಮಕ್ಕಳು ಸಂತೋಷದಿಂದ, ಸಾಮರಸ್ಯದಿಂದ ಓಡಾಡುವಂತೆ ಮಾಡುವುದೇ ನನ್ನ ಕ್ಷೇತ್ರದ ದೊಡ್ಡ ಅಭಿವೃದ್ಧಿ ಎಂದು ಯು.ಟಿ.ಖಾದರ್ ಹೇಳಿದರು.
ಸೈಯ್ಯದ್ ಮುಹಮ್ಮದ್ ಬ್ಯಾರಿ ಮತ್ತು ಉಮರ್ ಟೀಕೆ ಅವರು ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅನ್ನು ಸ್ಥಾಪನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂದಿನ ಕಾಲದಲ್ಲಿ ಎಷ್ಟೇ ಟೀಕೆ-ಟಿಪ್ಪಣಿಗಳು ಬಂದರೂ, ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು, ಎಲ್ಲರ ಸಹಕಾರ ಪಡೆದುಕೊಂಡು ಇಂದು ಒಂದು ಹಂತಕ್ಕೆ ಬಂದಿದೆ. ಇಡೀ ಸಮುದಾಯದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯನ್ನು ತಂದಿದೆ ಎಂದು ಅವರು ಹೇಳಿದರು.
ಯಾವುದು ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದೇವೋ, ಅದನ್ನು ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಸಾಧ್ಯವನ್ನಾಗಿ ಮಾಡಿದೆ. ನನ್ನ ವ್ಯಕ್ತಿತ್ವ ಬೆಳವಣಿಗೆಯಲ್ಲಿಯೂ ಈ ಅಸೋಸಿಯೇಷನ್ ಪ್ರಮುಖ ಪಾತ್ರವನ್ನು ವಹಿಸಿದೆ. ಮೂರು ದಶಕಗಳ ಹಿಂದೆ ನಾನು ಅಸೋಸಿಯೇಷನ್‍ನ ವಾರ್ಷಿಕ ಮಹೋತ್ಸವದಲ್ಲಿ ಕುಳಿತು ಭಾಷಣ ಕೇಳುತ್ತಿದ್ದೆ, ಈಗ ವಿಧಾನಸಭಾ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದೇನೆ. ನಿಮ್ಮ ಮಕ್ಕಳು ನಮಗಿಂತ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಅವರು ಹೇಳಿದರು.
ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್‍ನ ಆಡಳಿತ ಮಂಡಳಿಯ ಸದಸ್ಯ ಉಮರ್ ಟೀಕೆ ಮಾತನಾಡಿ, ಇಂದು ನಮ್ಮದೇ ಆದ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡಲಾಗುತ್ತದೆ. ಅಲ್ಲದೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುತ್ತಿದ್ದೇವೆ. ಈ ಸಂಸ್ಥೆಗಳ ಶೇ.80ರಷ್ಟು ಶಿಕ್ಷಕರು ಮುಸ್ಲಿಮೇತರರಾಗಿದ್ದಾರೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ‘ಎಸೆಸೆಲ್ಸಿಯಲ್ಲಿ ಶೇ.95ರಷ್ಟು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದಲ್ಲಿದ್ದಾರೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯುಸಿಯಲ್ಲಿ ಉತ್ತಮ ಶಿಕ್ಷಣವನ್ನು ನೀಡಬೇಕು. ಪಿಯುಸಿ ನಂತರ ಯುಜಿ, ಪಿಜಿಯಲ್ಲಿಯೂ ಶಿಕ್ಷಣ ನೀಡಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಝಕರಿಯಾ ಜೋಕಟ್ಟೆ, ಹಿರಿಯ ಪತ್ರಕರ್ತ ಬಿ.ಎಂ.ಹನೀಪ್ ಅವರನ್ನು ಗೌರವಿಸಿದರು.
ಪ್ರಶಸ್ತಿ ಪ್ರದಾನ :
ವರ್ಷದ ಬ್ಯಾರಿ ಪ್ರಶಸ್ತಿಯನ್ನು ಕೃಷಿಕ ಕೆ. ಅಬ್ದುಲ್ ಕರೀಮ್ ಮತ್ತು ವರ್ಷದ ಬ್ಯಾರ್ದಿ ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತೆ ಜುಬೇದಾ ಅವರಿಗೆ ಪ್ರದಾನ ಮಾಡಲಾಯಿತು. ಈ ವರ್ಷದ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ಪುರಸ್ಕಾರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್‍ನ ಅಧ್ಯಕ್ಷ ಅಡೂರ್ ಶಂಸುದ್ದೀನ್, ಆಡಳಿತ ಮಂಡಳಿಯ ಸದಸ್ಯರಾದ ಇಕ್ಬಾಲ್, ಡಾ.ಮಕ್ಸೂದ್ ಅಹಮ್ಮದ್ ಸೇರಿದಂತೆ ಮತ್ತಿತರರು ಇದ್ದರು.








































