ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದರೆ ಸದನದ ಹೊರಗೆ ಕಳುಹಿಸುತ್ತೇನೆ: ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ಸದನದ ಕರ್ಯಕಲಾಪಗಳಿಗೆ ಪದೇ ಪದೇ ಅಡ್ಡಿಪಡಿಸಿದರೆ, ತಮ್ಮ ಆಸನಗಳಲ್ಲಿ ಕುಳಿತುಕೊಂಡೆ ಮಾತನಾಡುತ್ತಿದ್ದರೆ, ಅಂತಹವರ ಹೆಸರನ್ನು ಸೂಚಿಸಿ, ಸದನದ ಹೊರಗೆ ಕಳುಹಿಸಬೇಕಾಗುತ್ತದೆ. ಅದಕ್ಕೆ ಆಡಳಿತ ಪಕ್ಷದವರು ಇರಲಿ, ವಿಪಕ್ಷದವರೆ ಇರಲಿ. ಅದಕ್ಕೆ ಅವಕಾಶ ನೀಡಬೇಡಿ ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದ ಪ್ರಸಂಗ ನಡೆಯಿತು.
ಮಂಗಳವಾರ ವಿಧಾನಸಭೆಯಲ್ಲಿ ವಿಜಿ ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಿ, ಮನರೇಗಾ ಪುನಃ ಸ್ಥಾಪಿಸಬೇಕು ಎಂದು ಸರಕಾರದ ವತಿಯಿಂದ ಮಂಡನೆ ಮಾಡಿದ ನಿರ್ಣಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಬಿಜೆಪಿ ಸದಸ್ಯರು ಪದೇ ಪದೇ ಮಧ್ಯಪ್ರವೇಶ ಮಾಡಿ ಅಡ್ಡಿಪಡಿಸುತ್ತಿದ್ದರಿಂದ ಅವರು ಈ ಮೇಲಿನಂತೆ ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ, ಸದನ ನಡೆಯಬೇಕಾದರೆ ಪರಸ್ಪರ ಸಹಕಾರ ಇರಬೇಕು. ನಾನು ಮಾತನಾಡುವಾಗ ಪದೇ ಪದೇ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ. ಇದೇ ಪ್ರವೃತ್ತಿ ಮುಂದುವರೆಸಿದರೆ ನೀವು ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ವಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯ ರಾಜೇಶ್ ನಾಯಕ್ ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ಸ್ಪೀಕರ್, ರಾಜೇಶ್ ನಾಯಕ್ ನಿಮಗೆ ಪದೇ ಪದೇ ಹೇಳುತ್ತಿದ್ದೇನೆ. ಒಂದು ಬಾರಿ ನಾನು ನಿಮ್ಮನ್ನು ಹೆಸರಿಸಿದರೆ, ಸದನದ ಹೊರಗೆ ಕಳುಹಿಸಬೇಕಾಗುತ್ತದೆ ಎಚ್ಚರಿಕೆ ಅಂದರು. ಅಲ್ಲದೇ, ವಿಪಕ್ಷ ನಾಯಕ ಅಶೋಕ್ ಅವರನ್ನು ನಿಮ್ಮ ಸದಸ್ಯರನ್ನು ನಿಯಂತ್ರಣದಲ್ಲಿರಿಸಿ ಎಂದರು.







