ಎಸೆಸೆಲ್ಸಿ ಪರೀಕ್ಷೆ: 144 ಶಾಲೆಗಳು ಶೂನ್ಯ ಫಲಿತಾಂಶ
625 ಅಂಕ ಪಡೆಯವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ 22 ವಿದ್ಯಾರ್ಥಿಗಳು

ಸಾಂದರ್ಭಿಕ ಚಿತ್ರ
ಬೆಂಗಳೂರು : 2025ರ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯನ್ನು ಬರೆದ 8,42,173 ವಿದ್ಯಾರ್ಥಿಗಳ ಪೈಕಿ 5,24,984 ವದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಒಟ್ಟು ಫಲಿತಾಂಶ ಶೇ.62.34ರಷ್ಟು ದಾಖಲಾಗಿದ್ದು, 2025ರಲ್ಲಿ ಪ್ರಥಮ ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಶೇ.66.14ರಷ್ಟಿದೆ.
ದಕ್ಷಿಣ ಕನ್ನಡ ಪ್ರಥಮ: ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳು ಮುಂಚೂಣಿಯಲಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಈ ಬಾರಿಯೂ ಕಳಪೆ ಫಲಿತಾಂಶವನ್ನು ದಾಖಲಿಸುವ ಮೂಲಕ ಕೊನೆಯ ಸ್ಥಾನದಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸ್ಥಾನದಲ್ಲಿದ್ದು, ಶೇ.91.12ರಷ್ಟು ಉತ್ತೀರ್ಣತೆಯನ್ನು ಸಾಧಿಸಿದೆ. ಉಡುಪಿ ದ್ವಿತೀಯ ಸ್ಥಾನದಲ್ಲಿದ್ದು, ಶೇ.89.96ರಷ್ಟು, ಉತ್ತರ ಕನ್ನಡ ತೃತೀಯ ಸ್ಥಾನದಲ್ಲಿದ್ದು, ಶೇ.83.19ರಷ್ಟು ಉತ್ತೀರ್ಣತೆಯನ್ನು ದಾಖಲಿಸಿವೆ. ಶಿವಮೊಗ್ಗ, ಕೊಡಗು, ಹಾಸನ, ಶಿರಸಿ, ಚಿಕ್ಕಮಗಳೂರು ನಂತರದ ಸ್ಥಾನದಲ್ಲಿವೆ.
ಕಲಬುರಗಿ ಕೊನೆಯ ಸ್ಥಾನ: ಕಲ್ಯಾಣ ಕರ್ನಾಟಕ ಜಿಲ್ಲೆಯಾದ ಕಲಬುರಗಿ ಕೇವಲ ಶೇ.42.43ರಷ್ಟು ತೇರ್ಗಡೆಯ ಪ್ರಮಾಣವನ್ನು ದಾಖಲಿಸುವ ಮೂಲಕ ಕೊನೆಯ ಸ್ಥಾನದಲ್ಲಿದೆ. ವಿಜಯಪುರ ಶೇ.49.58, ಯಾದಗಿರಿ ಶೇ.51, ರಾಯಚೂರು ಶೇ.52, ಬೀದರ್ ಶೇ.53, ಕೊಪ್ಪಳ ಶೇ.57, ಬಳ್ಳಾರಿ ಶೇ.60ರಷ್ಟು ಉತ್ತೀರ್ಣತೆಯನ್ನು ದಾಖಲಿಸಿವೆ.
144 ಶಾಲೆಗಳ ಫಲಿತಾಂಶ ಶೂನ್ಯ: 108 ಖಾಸಗಿ ಶಾಲೆಗಳು, 30 ಅನುದಾನಿತ ಹಾಗೂ 6 ಸರಕಾರಿ ಶಾಲೆಗಳು ಸೇರಿ ಒಟ್ಟು 144 ಶಾಲೆಗಳ ಫಲಿತಾಂಶ ಶೂನ್ಯವಾಗಿದೆ. 329 ಸರಕಾರಿ ಶಾಲೆ, 53 ಅನುದಾನಿತ ಹಾಗೂ 539 ಖಾಸಗಿ ಶಾಲೆಗಳ ಫಲಿತಾಂಶವು ಶೇ.100 ದಾಖಲಾಗಿದೆ. ಇನ್ನು ಶೇ.75ರಷ್ಟು ವಿದ್ಯಾರ್ಥಿಗಳು ಶೇ.60ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಮತ್ತಯ ಉನ್ನತ ದರ್ಜೆಯೊಂದಿಗೆ ತೇರ್ಗಡೆಯಾಗಿದ್ದಾರೆ.
ಹಿಂದಿನ ಸಾಲಿಗಿಂತಲೂ ಶೇ.8ರಷ್ಟು ಹೆಚ್ಚು ತೇರ್ಗಡೆ: ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ತೇರ್ಗಡೆಯ ಪ್ರಮಾಣ ಶೇ.8ರಷ್ಟು ಹೆಚ್ಚಾಗಿದೆ. 2024ರಲ್ಲಿ ಎಸೆಸೆಲ್ಸಿ ಫಲಿತಾಂಶವು ಶೇ.54ರಷ್ಟಿತ್ತು. ಈ ಬಾರಿಯ ಫಲಿತಾಂಶದಲ್ಲಿ ಉತ್ತೀರ್ಣತೆ ಶೇ.62.34ರಷ್ಟು ದಾಖಲಾಗಿದೆ.
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ: ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.74ರಷ್ಟು ಬಾಲಕಿಯರು, ಶೇ.58.07ರಷ್ಟು ಬಾಲಕರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿ 3,90,311 ಬಾಲಕರು ಪರೀಕ್ಷೆ ಬರೆದಿದ್ದು, 2,26,637 ಉತ್ತೀರ್ಣರಾಗಿದ್ದಾರೆ. 4,00,579 ಬಾಲಕಿಯರು ಪರೀಕ್ಷೆ ಬರೆದಿದ್ದು, 2,96,438 ಉತ್ತೀರ್ಣರಾಗಿದ್ದಾರೆ.
ಖಾಸಗಿ ಶಾಲೆಗಳ ಫಲಿತಾಂಶವು ಸರಕಾರಿ ಮತ್ತು ಅನುದಾನಿತ ಶಾಲೆಗಳ ಫಲಿತಾಂಶಕ್ಕಿಂತಲೂ ಉತ್ತಮವಾಗಿದೆ. ಖಾಸಗಿ ಶಾಲೆಗಳ ತೇರ್ಗಡೆಯ ಪ್ರಮಾಣ ಶೇ.75.59ರಷ್ಟಿದ್ದರೆ, ಸರಕಾರಿ ಶಾಲೆಗಳ ತೇರ್ಗಡೆಯ ಪ್ರಮಾಣ ಶೇ.62.7, ಅನುದಾನಿತ ಶಾಲೆಗಳ ತೇರ್ಗಡೆಯ ಪ್ರಮಾಣ ಶೇ.58.97ರಷ್ಟಿದೆ. ನಗರ ಪ್ರದೇಶದ ಶೇ.67.05ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಭಾಗದ ಶೇ.65.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
2025ರಲ್ಲಿ ಹೊಸದಾಗಿ ನೋಂದಣಿಯಾದ ರೆಗ್ಯುಲರ್ ವಿದ್ಯಾರ್ಥಿಗಳ ಫಲಿತಾಂಶ ಶೇ.66.14, ಖಾಸಗಿ ಅಭ್ಯರ್ಥಿಗಳ ಉತ್ತೀರ್ಣತೆ ಶೇ.8.15, ಪುರಾವರ್ತಿತ ಶಾಲಾ ವಿದ್ಯಾರ್ಥಿಗಳ ಉತ್ತೀರ್ಣತೆ ಶೇ.1.85, ಪುರಾವರ್ತಿತ ಖಾಸಗಿ ಅಭ್ಯರ್ಥಿಗಳ ಫಲಿತಾಂಶ ಶೇ.5ರಷ್ಟು ದಾಖಲಾಗಿದ್ದು, ಈ ಎಲ್ಲ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಶೇ.62.34ರಷ್ಟು ಇದೆ.
ಶೇ.57.61ರಷ್ಟು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಉತ್ತೀರ್ಣ: ಆಂಗ್ಲ ಮಾಧ್ಯಮ ಶಾಲೆಗಳ ತೇರ್ಗಡೆಯ ಪ್ರಮಾಣವು ಕನ್ನಡ ಮಾಧ್ಯಮ ಶಾಲೆಗಳ ತೇರ್ಗಡೆಯ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳ ಉತ್ತೀರ್ಣತೆ ಶೇ.78.38 ಇದ್ದರೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಕೇವಲ ಶೇ.57.61ರಷ್ಟು ಇದೆ. ಉರ್ದು ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶ ಶೇ.46.46, ಮರಾಠಿ ಶೇ.53.97, ತೆಲುಗು ಶೇ.74.56, ತಮಿಳು ಶೇ.37.88, ಹಿಂದಿ ಶೇ.53.72ರಷ್ಟಿದೆ.
2024-25ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ಮಾರ್ಚ್, ಎಪ್ರಿಲ್ನಲ್ಲಿ 2,818 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 8,42,173 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. 15,881 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು.
22 ಮಂದಿ ವಿದ್ಯಾರ್ಥಿಗಳಿಗೆ ಗರಿಷ್ಟ ಅಂಕ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 22 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು, ಇತಿಹಾಸ ನಿರ್ಮಿಸಿದ್ದಾರೆ. 624 ಅಂಕಗಳನ್ನು 65 ಮಂದಿ, 623 ಅಂಕಗಳನ್ನು 108 ಮಂದಿ, 622 ಅಂಕಗಳನ್ನು 189 ಮಂದಿ, 621 ಅಂಕಗಳನ್ನು 259 ಮಂದಿ, 620 ಅಂಕಗಳನ್ನು 327 ಮಂದಿ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
625 ಪಡೆಯವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ 22 ವಿದ್ಯಾರ್ಥಿಗಳು
ಅಖಿಲ್ ಅಹ್ಮದ್ ನದಾಫ್ - ವಿಜಯಪುರ
ಭಾವನಾ - ಬೆಂಗಳೂರು ಗ್ರಾಮಾಂತರ
ಧನಲಕ್ಷ್ಮಿ ಎಂ. - ಬೆಂಗಳೂರು
ಧನುಷ್ ಎಸ್. - ಮೈಸೂರು
ಧೃತಿ ಜೆ. - ಮಂಡ್ಯ
ಜಾಹ್ನವಿ ಎಸ್.ಎನ್. - ಬೆಂಗಳೂರು
ಮಧುಸೂದನ್ ರಾಜು ಎಸ್.- ಬೆಂಗಳೂರು
ಮುಹಮ್ಮದ್ ಮಸ್ತೂರ್ ಆದಿಲ್ - ತುಮಕೂರು
ಮೌಲ್ಯ ಡಿ ರಾಜ್ - ಚಿತ್ರದುರ್ಗ
ನಮನಾ ಕೆ. - ಶಿವಮೊಗ್ಗ
ನಮಿತಾ - ಬೆಂಗಳೂರು
ನಂದನ್ ಎಚ್.ಓ. - ಚಿತ್ರದುರ್ಗ
ನಿತ್ಯಾ ಎಂ ಕುಲಕರ್ಣಿ - ಶಿವಮೊಗ್ಗ
ರಂಜಿತಾ ಎ.ಸಿ. - ಬೆಂಗಳೂರು ಗ್ರಾಮಾಂತರ
ರೂಪಾ ಚನ್ನಗೌಡ ಪಾಟೀಲ್ - ಬೆಳಗಾವಿ
ಶಹಿಷ್ಣು ಎನ್ - ಶಿವಮೊಗ್ಗ
ಶಗುಫ್ತಾ ಅಂಜುಮ್ - ಶಿರಸಿ
ಸ್ವಸ್ತಿ ಕಾಮತ್ - ಉಡುಪಿ
ತನ್ಯಾ ಆರ್.ಎನ್.- ಮೈಸೂರು
ಉತ್ಸವ್ ಪಾಟೇಲ್ - ಹಾಸನ
ಯಶ್ವಿತಾ ರೆಡ್ಡಿ ಕೆ.ಬಿ - ಮಧುಗಿರಿ
ಯುಕ್ತಿ ಎಸ್ - ಬೆಂಗಳೂರು
‘ಉಡುಪಿ ಜಿಲ್ಲೆ 2024-25ನೆ ಸಾಲಿನ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ. ಶೇ.89.96ರಷ್ಟು ಫಲಿತಾಂಶ ಜಿಲ್ಲೆಗೆ ಲಭಿಸಿದ್ದು, ಈ ಸಾಧನೆಗೆ ಕಾರಣರಾದ ಜಿಲ್ಲಾಡಳಿತ, ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆ ಅಧಿಕಾರಿ ವರ್ಗದವರನ್ನು ಅಭಿನಂದಿಸುತ್ತೇನೆ. ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆ, ಇದೀಗ ಎಸೆಸೆಲ್ಸಿಯಲ್ಲಿಯೂ ಫಲಿತಾಂಶದಲ್ಲೂ ಉತ್ತಮ ಸಾಧನೆ ಮಾಡಿದೆ. ಈ ಪರೀಕ್ಷೆಯಲ್ಲಿ ಪಾಸಾದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ’
-ಲಕ್ಷ್ಮೀ ಹೆಬ್ಬಾಳಕರ್ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ
‘2024-25ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು ಈ ಸಾಧನೆಗೆ ಕಾರಣರಾದ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದನಾರ್ಹರು. ಶೈಕ್ಷಣಿಕ ಜೀವನದ ಬಹುಮುಖ್ಯ ಹಂತವಾಗಿರುವ ಎಸೆಸೆಲ್ಸಿ, ನಿಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ. 625 ಅಂಕಗಳಿಗೆ 625 ಅಂಕ ಪಡೆದ 22ವಿದ್ಯಾರ್ಥಿಗಳಿಗೂ ನನ್ನ ಶುಭ ಹಾರೈಕೆಗಳು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಹತಾಶರಾಗದೆ ಮುಂದಿನ ಪರೀಕ್ಷೆಗೆ ತಯಾರಾಗಿ, ಯಶಸ್ಸು ನಿಮ್ಮದಾಗಲಿ. ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ’
-ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ







