‘ರಬ್ಬರ್ಗೆ ಬೆಂಬಲ ಬೆಲೆ-ವಿಮೆ ಸೌಲಭ್ಯ’ | ರಬ್ಬರ್ ಮಂಡಳಿ ಕ್ರಮ ಕೈಗೊಳ್ಳಬೇಕು : ಎಸ್.ಎಸ್.ಮಲ್ಲಿಕಾರ್ಜುನ್

ಬೆಂಗಳೂರು : ರಬ್ಬರ್ ಬೆಳೆಯುವ ರೈತರು ತೊಂದರೆಗಳನ್ನು ಅನುಭವಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ರಬ್ಬರ್‍ಗೆ ಬೆಂಬಲ ಬೆಲೆ ನಿಗದಿಪಡಿಸುವ ಮತ್ತು ಕೃಷಿ ಹವಾಮಾನ ಆಧಾರಿತ ವಿಮೆ ಸೌಲಭ್ಯ ಒದಗಿಸಲು ಇರುವ ಸಾಧ್ಯತೆ ಬಗ್ಗೆ ರಬ್ಬರ್ ಮಂಡಳಿಯು ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯೆ ಭಾಗೀರಥಿ ಮುರುಳ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಬ್ಬರ್ ಬೆಳೆಯು ಬಹುವಾರ್ಷಿಕ ವಾಣಿಜ್ಯ ಬೆಳೆಯಾಗಿದ್ದು, ಪ್ಲಾಂಟೇಷನ್ ಬೆಳೆಯಾಗಿದೆ. ಈ ಬೆಳೆಯು ಕೇಂದ್ರ ಸರಕಾರದ ಸಂಸ್ಥೆಯಾದ ರಬ್ಬರ್ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದು, ರಬ್ಬರ್ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ರಬ್ಬರ್ ಮಂಡಳಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.
ರಬ್ಬರ್ ಮಾರುಕಟ್ಟೆ ಕುರಿತಂತೆ ನೈಸರ್ಗಿಕ ರಬ್ಬರ್ ಬೆಲೆಯು ಮುಕ್ತ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಸರಬರಾಜು ಮೇಲೆ ಅವಲಂಬಿತವಾಗಿದೆ. ಅಲ್ಲದೆ, ಅಂತರ್‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದೊರೆಯುವ ರಬ್ಬರ್ ಬೆಲೆಯು ಸಹ ಸ್ಥಳೀಯ ರಬ್ಬರ್ ಮೇಲೆ ಪ್ರಭಾವ ಬೀರುತ್ತದೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು.
ನೈಸರ್ಗಿಕ ರಬ್ಬರ್ ಮೇಲೆ ವಿಧಿಸುವ ಆಮದು ಸುಂಕ ಸಹ ದರಗಳನ್ನು ನಿರ್ಧರಿಸುತ್ತದೆ. ರಬ್ಬರ್ ಉತ್ಪನ್ನವು ಕೈಗಾರಿಕಾ ಉದ್ದೇಶಗಳಿಗೆ ವಿನಿಯೋಗವಾಗುತ್ತದೆ. ಹೀಗಾಗಿ, ವಾಣಿಜ್ಯ ಬೆಳೆಯಾದ ರಬ್ಬರ್‍ನ ಬೆಲೆ ವಿಷಯವು ಬಹುಪಾಲು ಕೇಂದ್ರ ರಬ್ಬರ್ ಮಂಡಳಿ ಹಾಗೂ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅವರು ಹೇಳಿದರು.







