ರಾಜ್ಯ ಸರಕಾರ ಕನ್ನಡ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಿ : ನಾರಾಯಣಗೌಡ ಆಗ್ರಹ

ನಾರಾಯಣಗೌಡ
ಬೆಂಗಳೂರು : ರಾಜ್ಯ ಸರ್ಕಾರದ ಸಚಿವ ಸಂಪುಟ ಇತ್ತೀಚೆಗೆ ಕೆಲವು ಪ್ರಕರಣಗಳನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಅವರು, ಕನ್ನಡ ಪರ ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿರುವ ಅವರು, ಹಲವು ವರ್ಷಗಳಿಂದ ಕನ್ನಡ ಹೋರಾಟಗಾರರ ಮೇಲೆ ದಾಖಲಾಗಿರುವ ಸಾವಿರಾರು ಪ್ರಕರಣಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಮನವಿ ಮಾಡುತ್ತಲೇ ಬಂದಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಹಲವು ಬಾರಿ ಭರವಸೆ ನೀಡಿದ್ದಾರೆ. ತಾವು ಖುದ್ದಾಗಿ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಕಾನೂನು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ಆದರೆ, ಸರ್ಕಾರ ಕೇವಲ ಎರಡು ಪ್ರಕರಣಗಳನ್ನು ಮಾತ್ರ ಹಿಂಪಡೆಯಲು ತೀರ್ಮಾನಿಸಿರುವುದು ನಾಮಕಾವಸ್ತೆಯ ಕ್ರಮವಾಗಿದೆ ಎಂದು ಟೀಕಿಸಿದ ಅವರು, “ನನ್ನ ಮೇಲೆ ಒಟ್ಟು 27 ಪ್ರಕರಣಗಳಿವೆ. ಅವೆಲ್ಲವೂ ಕನ್ನಡ ಚಳವಳಿಗೆ ಸಂಬಂಧಿಸಿದವು. ಯಾರ ಮೇಲಾದರೂ ಹಲ್ಲೆ ನಡೆಸಿದ ಅಥವಾ ಸಮಾಜದಲ್ಲಿ ಸಂಘರ್ಷ ಸೃಷ್ಟಿಸಿದ ಪ್ರಕರಣಗಳಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಕರವೇ ಕಾರ್ಯಕರ್ತರ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿದ್ದು, ಅವುಗಳ ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಕನ್ನಡ ಹೋರಾಟಗಾರರು ಬೀದಿಗೆ ಇಳಿಯಬಾರದು, ಕನ್ನಡ ಅಸ್ಮಿತೆಗಾಗಿ ಯುವಕರು ಹೋರಾಟ ಮಾಡಬಾರದು ಎಂಬ ಮನೋಭಾವ ಸರ್ಕಾರದಲ್ಲಿದೆ ಎಂಬುದು ಈಗ ಸ್ಪಷ್ಟವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯದಂತೆ ಕುತಂತ್ರ ನಡೆಯುತ್ತಿದ್ದು, ಸಚಿವ ಸಂಪುಟವನ್ನು ತಪ್ಪು ದಾರಿಗೆಳೆಯುವ ಅಧಿಕಾರಿಗಳ ಪಾತ್ರವೂ ಇದೆ ಎಂದು ಪರೋಕ್ಷವಾಗಿ ಆರೋಪಿಸಿದರು.
ಕರವೇ ಯಾವ ಪಕ್ಷದ ಪರವೂ ಇಲ್ಲ. ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ, ಕನ್ನಡಕ್ಕೆ ವಿರುದ್ಧವಾಗಿ ನಿಂತರೆ ಅವರ ವಿರುದ್ಧವೇ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಕನ್ನಡ ನಾಮಫಲಕ ಚಳವಳಿ ವೇಳೆ ಕಾಂಗ್ರೆಸ್ ಸರ್ಕಾರವೇ ತಮ್ಮ ವಿರುದ್ಧ ಒಂದೇ ದಿನ 17 ಪ್ರಕರಣ ದಾಖಲಿಸಿ, 16 ದಿನ ಜೈಲಿಗೆ ಕಳುಹಿಸಿತ್ತು. ಆ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ಮುಂದುವರಿಯುತ್ತಿವೆ ಎಂದು ಅವರು ಹೇಳಿದ್ದಾರೆ.
ಪ್ರಕರಣಗಳಿಗೆ ಹೆದರಿ ಹೋರಾಟ ನಿಲ್ಲಿಸುವವರಲ್ಲ ನಾವು. ಕನ್ನಡಕ್ಕಾಗಿ ಸಾವಿರ ಪ್ರಕರಣ ಬಂದರೂ ಚಳವಳಿಯ ದಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.






