ನಾಳೆಯಿಂದ (ಜ.17) ರಾಜ್ಯಮಟ್ಟದ ಚುನಾವಣಾ ರಸಪ್ರಶ್ನೆ ಕಾರ್ಯಕ್ರಮ

ಬೆಂಗಳೂರು: ಚುನಾವಣಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರೌಢ ಶಾಲಾ ಮಕ್ಕಳಿಗೆ ರಾಜ್ಯಮಟ್ಟದಲ್ಲಿ ಚುನಾವಣಾ ರಸಪ್ರಶ್ನೆ ಕಾರ್ಯಕ್ರಮವನ್ನು ಜ.17 ಹಾಗೂ 18ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.
34 ಜಿಲ್ಲೆಗಳಿಂದ ಬಂದಂತಹ ಒಂದು ತಂಡಕ್ಕೆ ಜ.17ರಂದು ಲಿಖಿತ ಪರೀಕ್ಷೆಯನ್ನು ನಗರದ ಶೇಷಾದ್ರಿ ರಸ್ತೆಯಲ್ಲಿರುವ ನಿರ್ವಾಚನ ನಿಲಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಈ ಲಿಖಿತ ಪರೀಕ್ಷೆಯಲ್ಲಿ ವಿಭಾಗವಾರು ಸ್ಪರ್ಧೆಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದ ಒಟ್ಟು 16 ಜಿಲ್ಲಾ ತಂಡಗಳನ್ನು ವಿಭಾಗವಾರು ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.
4 ವಿಭಾಗವಾರು ತಂಡಗಳಿಗೆ ಪ್ರತ್ಯೇಕ ಸ್ಪರ್ಧೆಯನ್ನು ಏರ್ಪಡಿಸಿ, ವಿಭಾಗವಾರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ತಂಡವನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ರಾಜ್ಯಮಟ್ಟದ ಚುನಾವಣಾ ರಸಪ್ರಶ್ನೆಗೆ ಆಯ್ಕೆಯಾದ 4 ಜಿಲ್ಲೆಗಳ ತಂಡಗಳಿಗೆ ಅಂತಿಮ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ವಿಭಾಗವಾರು ಮಟ್ಟದ 4 ಸ್ಪರ್ಧೆ ಮತ್ತು ರಾಜ್ಯಮಟ್ಟದ ಒಂದು ಸ್ಪರ್ಧೆಯನ್ನು ಚಿತ್ರೀಕರಿಸಿ ಬೆಂಗಳೂರು ದೂರದರ್ಶನ ಕೇಂದ್ರ ಬಿತ್ತರಿಸುವ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಬಿತ್ತರಿಸಲಾಗುವುದು.
ಜಿಲ್ಲೆಗಳಿಂದ ಈ ಕಾರ್ಯಕ್ರಮಕ್ಕೆ ಬರುವ ಸ್ಪರ್ಧಾ ತಂಡಗಳಿಗೆ ಕಿರು ಪ್ರವಾಸವನ್ನು ಏರ್ಪಡಿಸಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದನಗಳ ವೀಕ್ಷಣೆ, ನೆಹರು ಪ್ಲಾನಿಟೋರಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಬಾಲಭವನಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.







