ಸ್ಟಿಂಗ್ ಪ್ರಕರಣ | ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ನಿಂದ ಉಚ್ಛಾಟನೆಗೊಂಡಿರುವ ಕೃಪಾ ಆಳ್ವಾ ಅವರಿಗೆ ನೋಟೀಸ್ ನೀಡಿದ ಬೆನ್ನಲ್ಲೇ, ಸೋಮವಾರ ಅವರು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಮೊಬೈಲ್, ಲ್ಯಾಪ್ಟಾಪ್ ಸಹಿತ ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು ನೋಟೀಸ್ ನೀಡಿದ್ದರು. ಈಗ ಸುಮಾರು 2 ಗಂಟೆ ವಿಚಾರಣೆ ನಡೆದಿದ್ದು, ಮತ್ತೆ ನ.11 ರಂದು ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾ ಅವರಿಗೆ ಪೊಲೀಸರು ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಕೃಪಾ ಆಳ್ವಾ ಪರ ವಕೀಲೆ ನಿಖಿತಾ ಮಾತನಾಡಿ, ಕೃಪಾ ಆಳ್ವಾ ಈಗಾಗಲೇ ಡಿಸಿಪಿ ಎದುರು ಎರಡು ಬಾರಿ ಹೇಳಿಕೆ ಕೊಟ್ಟಿದ್ದರು. ಅಧಿಕೃತವಾಗಿ ಈಗ ಹೇಳಿಕೆ ನೀಡಲು ನೋಟಿಸ್ ನೀಡಲಾಗಿತ್ತು. ಹೀಗಾಗಿ, ಸಿಸಿಬಿ ಸೈಬರ್ ತನಿಖಾಧಿಕಾರಿ ಮುಂದೆ ಹೇಳಿಕೆ ಕೊಡಲು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕೃಪಾ ಆಳ್ವಾ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣವಾಗಿ ಮಾತಾಡಲಿದ್ದಾರೆ ಎಂದು ಹೇಳಿದರು.




