ಪೂರ್ವ ಪ್ರಾಥಮಿಕ ಶಾಲೆಗಳ ಮೇಲೆ ನಡೆಸುತ್ತಿರುವ ಕಿರುಕಳ ನಿಲ್ಲಿಸಿ: ಪೃಥ್ವಿ ಬನವಾಸಿ

ಬೆಂಗಳೂರು, ಫೆ.25: ಶಾಲಾ ಶಿಕ್ಷಣ ಇಲಾಖೆಯು ಪೂರ್ವ ಪ್ರಾಥಮಿಕ ಶಾಲೆಗಳ ಮೇಲೆ ಬೃಹತ್ ಶಾಲೆಗಳಿಗೆ ಅನ್ವಯವಾಗುವ ಕಠಿಣ ನಿಯಮಗಳನ್ನು ಹೇರುವುದರ ಮೂಲಕ ಕಿರುಕಳ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಕೌನ್ಸಿಲ್ ಆಫ್ ಪ್ರಿಸ್ಕೂಲ್ಸ್ (ಕೆಸಿಪಿಎಸ್) ಸಂಘಟನೆಯ ಕಾರ್ಯದರ್ಶಿ ಪೃಥ್ವಿ ಬನವಾಸಿ ಮನವಿ ಮಾಡಿದ್ದಾರೆ.
ಬುಧವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ ಶಾಲೆಗಳಿವೆ. ಸರಕಾರ ಈ ಶಾಲೆಗಳನ್ನು ಮುಚ್ಚಲು ಮುಂದಾದರೆ, ಲಕ್ಷಾಂತರ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಮತ್ತು ಸುಮಾರು 5 ಲಕ್ಷ ಮಹಿಳಾ ಉದ್ಯೋಗಿಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.
ಸರಕಾರ ಇತ್ತೀಚಿನ ಸುತ್ತೋಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ 30 ವರ್ಷಗಳ ಲೀಸ್ ಅಗ್ರಿಮೆಂಟ್ ಕಡ್ಡಾಯಗೊಳಿಸಿದೆ. ಖಾಸಗಿ ಮಾರುಕಟ್ಟೆಯಲ್ಲಿ ಯಾವುದೇ ಮಾಲಕರು ಇಷ್ಟು ಸುದೀರ್ಘ ಅವಧಿಗೆ ಒಪ್ಪಂದ ಮಾಡಿಕೊಳ್ಳುವುದು ಅಸಾಧ್ಯ. ಪ್ರತಿಯೊಂದು ಕೊಠಡಿಯು ಕನಿಷ್ಠ 18x20 ಅಡಿ ಇರಬೇಕೆಂಬ ನಿಯಮ ಮಾಡಿದೆ. ಇದು ಬಡಾವಣೆಗಳಲ್ಲಿರುವ ಮನೆಗಳಲ್ಲಿ ನಡೆಸುವ ಶಾಲೆಗಳಿಗೆ ಅಸಾಧ್ಯ ಮತ್ತು ರಾಷ್ಟಿçÃಯ ಶಿಕ್ಷಣ ನೀತಿ ಆಶಯಕ್ಕೆ ವಿರುದ್ಧವಾಗಿದೆ ಎಂದು ಪೃಥ್ವಿ ಬನವಾಸಿ ವಿವರಿಸಿದರು.
ಸಣ್ಣ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸಲು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಬೇಕೆಂಬ ನಿಯಮವು ಆರ್ಥಿಕವಾಗಿ ಮತ್ತು ಕಾನೂನಾತ್ಮಕವಾಗಿ ಅಸಾಧ್ಯವಾಗಿದೆ. ಶಾಲಾ ನೋಂದಣಿ ಪೋರ್ಟಲ್ ಸಾರ್ವಜನಿಕರಿಗೆ ಲಭ್ಯವಿಲ್ಲದೆ ಕೇವಲ ಬಿಇಒ ಕಚೇರಿಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ವಿಳಂಬಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.
ಪೂರ್ವ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದರೆ, ಪೋಷಕರ ಮೇಲೆ ಆರ್ಥಿಕ ಹೊರೆಯಾಗಲಿದೆ. ಇದರಿಂದಾಗಿ ಶಾಲೆಗಳ ಏಕಸ್ವಾಮ್ಯ ಹೆಚ್ಚಾಗುತ್ತದೆ ಮತ್ತು ಶಾಲಾ ಶುಲ್ಕವು ಸುಮಾರು 5 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ ಸರಕಾರ ಈ ಕೂಡಲೇ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಪ್ರತ್ಯೇಕ ಮತ್ತು ಸರಳ ನಿಯಮಗಳನ್ನು ರೂಪಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು ಎಂದು ಪೃಥ್ವಿ ಬನವಾಸಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಡಾ.ಅರುಣ ಪ್ರಸಾದ್, ಸವಿತಾ ಪಾಟೀಲ್, ಸಂಧ್ಯಾ, ಸಹನಾ ನಾಗೇಂದ್ರ, ಸೋಮನಾಥ್, ಸಂಪತ್ ಕುಮಾರ್, ಚಿರಾಗ ಅಗರವಾಲ್ ಉಪಸ್ಥಿತರಿದ್ದರು.






