ಪಿಆರ್ ಸಿ ವಿರುದ್ಧ ರಾಜ್ಯಪಾಲರಿಗೆ ಮನವಿ: ಆರ್.ಅಶೋಕ್

ಬೆಂಗಳೂರು: ರಾಜ್ಯ ಸರಕಾರವು ಕಾಂಗ್ರೆಸ್ ಗೆ ಮತ ಹಾಕುವವರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ ) ನೀಡಿ ಅವರನ್ನು ಇಲ್ಲೇ ಶಾಶ್ವತವಾಗಿ ನೆಲೆಸುವಂತೆ ಮಾಡುವ ಹುನ್ನಾರ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ ಸಿ) ಕೊಡದಂತೆ ತಡೆಯಲು ಕೋರಿ ಇವತ್ತು ಮಾನ್ಯ ರಾಜ್ಯಪಾಲರಿಗೆ ಮನವಿ ಕೊಡಲಾಗಿದೆ. 10 ವರ್ಷ ರಾಜ್ಯದಲ್ಲಿ ಇರುವವರಿಗೆ ಪಿಆರ್ಸಿ ನೀಡುವ ಮೂಲಕ ಅವರು ಈ ರಾಜ್ಯದ ಶಾಶ್ವತ ಪ್ರಜೆ ಎಂಬಂತೆ ಬಿಂಬಿಸಿ ರೇಷನ್ ಕಾರ್ಡ್, ಆರೋಗ್ಯ ಕಾರ್ಡ್, ಮನೆ ಮತ್ತಿತರ ಸೌಕರ್ಯಗಳನ್ನು ನೀಡಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪಿಎಫ್ಐ, ಕೆಎಫ್ಡಿ ಉಪಟಳ ರಾಜ್ಯದಲ್ಲಿ ಜಾಸ್ತಿಯಾಗಿದೆ. ಅವರ ಮೇಲಿದ್ದ ಕೇಸುಗಳನ್ನು ಕಾಂಗ್ರೆಸ್ಸಿನವರು ವಾಪಸ್ ಪಡೆಯುತ್ತಿದ್ದಾರೆ. ಈಗ ಬಾಂಗ್ಲಾದೇಶದವರು ಕರ್ನಾಟಕದಲ್ಲಿ 25ರಿಂದ 30 ಲಕ್ಷ ಜನರು ಇರುವ ಮಾಹಿತಿ ಇದೆ. ಈಗ ಎಸ್ಐಆರ್ ನಡೆಯುತ್ತಿದೆ. ಅದಕ್ಕೆ ವಿರುದ್ಧವಾಗಿ ಇವರು ಪಿಆರ್ಸಿ ಕೊಡುವುದು ಸರಿಯಲ್ಲ. ಕೇಂದ್ರ ಸರಕಾರಕ್ಕೆ ಮಾತ್ರ ಇಂಥ ಪ್ರಮಾಣಪತ್ರ ಕೊಡಲು ಅಧಿಕಾರ ಇದೆ ಎಂದು ಹೇಳಿದರು.
ಜಿಬಿಎ, ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಚುನಾವಣೆಗೆ ಮತದಾರರನ್ನು ಉಳಿಸಿಕೊಳ್ಳಲು ಅಕ್ರಮವಾಗಿ, ದೇಶದ್ರೋಹಿ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಸಂಬಂಧ ಸರಕಾರಕ್ಕೆ ಎಚ್ಚರಿಕೆ ಕೊಡುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದು ಅಶೋಕ್ ವಿವರಿಸಿದರು.
ಕಾಲ್ತುಳಿತ ಘಟನೆ ಮುಚ್ಚಿಹಾಕುವ ಹುನ್ನಾರ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ದುರ್ಘಟನೆಗೆ ಸರಕಾರವೇ ನೇರ ಕಾರಣ ಎಂದು ವಿಧಾನಸಭೆಯಲ್ಲಿ ನಾವು ತಿಳಿಸಿದ್ದೆವು. ಈಗ ವರದಿಯಲ್ಲೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅವತ್ತು ಕಮಿಷನರ್, ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಹೆಂಡತಿ, ಮಕ್ಕಳ, ಮೊಮ್ಮಕ್ಕಳ ಜೊತೆ ವೇದಿಕೆಯಲ್ಲಿ ಇದ್ದವರ ಮೇಲೆ ಕ್ರಮ ಆಗಬೇಕಿತ್ತು. ಅವರ ಮೇಲೆ ಕೇಸೇ ಮಾಡಿಲ್ಲ ಎಂದು ಆಕ್ಷೇಪಿಸಿದರು. ಇದೀಗ ಅಧಿಕಾರಿಗಳು ನಿರಪರಾಧಿಗಳಾದರೆ ಅಪರಾಧಿಗಳು ಯಾರು? ಈ ಯುವಜನರ ಸಾವಿಗೆ ನ್ಯಾಯ ಎಲ್ಲಿದೆ? ಎಂದು ಪ್ರಶ್ನಿಸಿದರು. ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಮಾಡಿದ್ದಾರೆ. ಇದು ಅಕ್ಷಮ್ಯ ಎಂದು ಆರೋಪಿಸಿದ ಆರ್.ಅಶೋಕ್, ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುತ್ತೇವೆ ಎಂದು ತಿಳಿಸಿದರು.
ಸರಕಾರ ದಿವಾಳಿ ಆಗಿದೆಯೇ?
ಎಸ್ಡಿಆರ್ಎಫ್ ಹಣ ಈಗಾಗಲೇ ಬಂದಿದೆ. ಅದನ್ನೇನು ಮಾಡಿದ್ದೀರಿ ಎಂದು ಇನ್ನೊಂದು ಪ್ರಶ್ನೆಗೆ ಮರುಪ್ರಶ್ನೆ ಹಾಕಿದ ಅಶೋಕ್, ಎನ್ಡಿಆರ್ಎಫ್ ಹಣ ಬರಲು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಬರಪೀಡಿತ ಎಂದು ಘೋಷಿಸಿ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಬೇಕು. ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಬಗ್ಗೆ ವರದಿ ಕೊಟ್ಟಿಲ್ಲ. ಪತ್ರ ಬರೆದಿದ್ದೇಕೆ? ನೀವು ಪಾಪರ್ ಆಗಿದ್ದೀರಾ? ಖಜಾನೆ ಖಾಲಿ ಆಗಿದೆಯೇ? ಎಂದು ಕೇಳಿದರು.
ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ. ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಪತ್ರ ಬರೆಯುತ್ತೀರಾ? ಇದು ಬಹಳ ದಿನ ನಡೆಯುವುದಿಲ್ಲ ಎಂದ ಅಶೋಕ್, ರಾಜ್ಯ ಸರಕಾರವು ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಬರ ಎಂದು ಪ್ರಕಟಿಸಿ, ಕುಡಿಯುವ ನೀರು, ಜಾನುವಾರುಗಳಿಗೆ ಸಂಬಂಧಿಸಿ ಹಣ ಕೊಡಬೇಕೆಂದು ಆಗ್ರಹಿಸಿದರು.
ಯಾವ್ಯಾವ ಸಚಿವರು ಮನೆ ನವೀಕರಣಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದಾರೆಂದು ಕೇಳಿ ಸರಕಾರಕ್ಕೆ ಪತ್ರ ಬರೆದು ಒಂದು ತಿಂಗಳಾಗಿದೆ. ಗ್ಯಾರಂಟಿ ಸಮಿತಿ ರಾಜ್ಯ ಅಧ್ಯಕ್ಷ, ಉಪಾಧ್ಯಕ್ಷರಿಗೆ ಕೊಟ್ಟ ಭತ್ತೆ ಕುರಿತಂತೆ ಕೇಳಿದ್ದು, ಉತ್ತರ ಸಿಕ್ಕಿಲ್ಲ ಎಂದ ಅಶೋಕ್, ಈ ಸರಕಾರ ಯಾವ ಪತ್ರಕ್ಕೂ ಉತ್ತರ ಕೊಡುತ್ತಿಲ್ಲ ಎಂದು ಟೀಕಿಸಿದರು. ಲೂಟಿ ಮಾಡುತ್ತಾರೆ. ವಿವರ ಕೇಳಿದರೆ ಉತ್ತರವೇ ನೀಡುವುದಿಲ್ಲ ಎಂದು ಆರೋಪಿಸಿದರು.






