MNREGA ಕಾಯ್ದೆ ಪುನರ್ ಸ್ಥಾಪನೆಯಾಗುವ ವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜ.13: MNREGA ಕಾಯ್ದೆ ಪುನರ್ ಸ್ಥಾಪನೆ ಆಗಿ ವಿಬಿಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಕೆಪಿಸಿಸಿ ವತಿಯಿಂದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಸಂಗ್ರಾಮ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಗುವ ಆಂದೋಲನ. ಉತ್ತರ ಭಾರತದಲ್ಲಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಕಳೆದ ತಿಂಗಳು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. MNREGA ರದ್ದು ಮಾಡಿರುವುದನ್ನು ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರಕಾರ MNREGA ರದ್ದು ಮಾಡಿ ವಿಬಿ ಜಿ ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ರೂಪಿಸಿದೆ. ಮಹಾತ್ಮ ಗಾಂಧಿ ಹೆಸರು ಎಂದರೆ ಅವರಿಗೆ ಅಲರ್ಜಿ ಎಂದರು.
ದೇಶದಲ್ಲಿ 12.16 ಕೋಟಿ ಕಾರ್ಮಿಕರಿಗೆ ಕೆಲಸ
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ MNREGA ಕಾಯ್ದೆಯನ್ನು ಗ್ರಾಮೀಣ ಪ್ರದೇಶದ ಬಡವರಿಗೆ ಕೆಲಸದ ಹಕ್ಕು ನೀಡಲೆಂದು ಮೂಲಭೂತ ಹಕ್ಕನ್ನಾಗಿಸಿದರು. ನಿರುದ್ಯೋಗ, ಆಹಾರ, ಮಾಹಿತಿ, ಕಾಡಿನಲ್ಲಿ ವಾಸಿಸುವ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಿದರು. ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಅರಣ್ಯ ವಾಸಿಗಳ ಹಕ್ಕು ಒದಗಿಸುವ ಕಾಯ್ದೆಗಳನ್ನು ರೂಪಿಸಿದರು. 20 ವರ್ಷಗಳಿಂದ ಜಾರಿಯಲ್ಲಿದ್ದ ಕಾಯ್ದೆಯಡಿ 12.16 ಕೋಟಿ ಕಾರ್ಮಿಕರು ದೇಶದಲ್ಲಿ ಕೆಲಸ ಮಾಡುತ್ತಿದ್ದು, 6.21ಕೋಟಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದರು.
ವಿಬಿಜಿ ರಾಮ್ ಜಿ ಮೂಲಕ ಮತ್ತೊಮ್ಮೆ ಗಾಂಧೀಜಿ ಕೊಲೆ
ಗ್ರಾಮೀಣ ಪ್ರದೇಶದಲ್ಲಿ 365 ದಿನಗಳ ಕಾಲ ಕೆಲಸ ಕೇಳಬಹುದಾಗಿತ್ತು. ಕಾರ್ಮಿಕರು ಅವರ ಊರಿನಲ್ಲಿ, ಅವರ ಜಮೀನಿನಲ್ಲಿಯೇ ಕೆಲಸ ಮಾಡಬಹುದಾಗಿತ್ತು. ಇದನ್ನು ಬದಲಾಯಿಸಿ ಮೋದಿ ಸರಕಾರ ವಿಬಿಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ದಶರಥ ರಾಮ, ಸೀತಾ ರಾಮ ಅಥವಾ ಕೌಶಲ್ಯ ರಾಮನಲ್ಲ. ಮಹಾತ್ಮಾ ಗಾಂಧಿ ಕೊಂದ ನಾಥೂರಾಮ ಇದು. ಗಾಂಧಿಯವರನ್ನು ಮೊತ್ತೊಮ್ಮೆ ಕೊಲ್ಲುತ್ತಿದ್ದಾರೆ ಎಂದರು.
ನರೇಗಾ ಬಚಾವ್ ಆಂದೋಲನ ಜನಾಂದೋಲನವಾಗಬೇಕು
ಈಗ ಕೇಂದ್ರ ಸರಕಾರ ಅಧಿಸೂಚನೆ ಮೂಲಕ ಇಂಥ ಕಡೆ ಕೆಲಸ ಎಂದು ನಿಗದಿ ಮಾಡುತ್ತದೆ. ಅಲ್ಲಿ ಕೆಲಸ ಮಾಡಬೇಕು. ಈಗ ರಾಜ್ಯಗಳು 40 ಶೇ. ವೆಚ್ಚವನ್ನು ಭರಿಸಬೇಕಿದೆ. 2500 ಕೋಟಿ ರೂ. ರಾಜ್ಯ ಸರ್ಕಾರ ಕೊಡಬೇಕಾಗುತ್ತದೆ. ಅದಕ್ಕಾಗಿಯೇ ನರೇಗಾ ಬಚಾವ್ ಆಂದೋಲನವನ್ನು ರೂಪಿಸಿದೆ. ಇದು ಜನಾಂದೋಲನವಾಗಿ ಪರಿವರ್ತನೆ ಆಗಬೇಕು ಎಂದರು.







