ಡಿಕೆಶಿಗೆ ಸಿಎಂ ಆಗುವ ಹಣೆಬರಹವಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ : ಎಸ್.ಟಿ.ಸೋಮಶೇಖರ್

ಎಸ್.ಟಿ.ಸೋಮಶೇಖರ್
ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಹಣೆಬರಹವಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಯಶವಂತಪುರ ಕ್ಷೇತ್ರದ ಸೂಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪೇಗೌಡ ಬಡಾವಣೆಯಲ್ಲಿ 2ನೇ ಹಂತದ ಸಮಗ್ರ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಡಿ.ವಿ.ಸದಾನಂದಗೌಡರು ಕೆಎಂಎಫ್ ಅಧ್ಯಕ್ಷರಾಗುವುದಕ್ಕೇ ಆಗಿರಲಿಲ್ಲ, ಮುಖ್ಯಮಂತ್ರಿಯಾದರು. ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಯಾರಾದರೂ ಅಂದುಕೊಂಡಿದ್ದರಾ? ಕಡಿಮೆ ಸಂಖ್ಯಾ ಬಲವನ್ನು ಹೊಂದಿದ್ದ ಕುಮಾರಸ್ವಾಮಿ ಹಣೆ ಬರಹದಿಂದ ಮುಖ್ಯಮಂತ್ರಿ ಆಗಿರಲಿಲ್ಲವೇ? ಅದರಂತೆ ಡಿ.ಕೆ.ಶಿವಕುಮಾರ್ಗೆ ಸಿಎಂ ಆಗುವ ಹಣೆಬರಹವಿದ್ದರೆ ಆಗುತ್ತಾರೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಪದೇ ಪದೇ ಭೇಟಿ ಮಾಡುತ್ತೇನೆ. ಆದರೆ, ಅವರ ಜೊತೆ ಯಾವುದೇ ರಾಜಕೀಯ ವಿಚಾರಗಳನ್ನು ಮಾತನಾಡುವುದಿಲ್ಲ, ಕೇಳುವುದಿಲ್ಲ. ನನ್ನ ಕೆಲಸಗಳಿಗಷ್ಟೇ ನಾನು ಸೀಮಿತನಾಗಿದ್ದೇನೆ. ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.





