ಬೆಂಗಳೂರು | ನ್ಯಾಯಾಲಯದ ಆವರಣದಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.9: ನಗರದ ಸಿಟಿ ಸಿವಿಲ್ ಕೋರ್ಟ್ ಕಟ್ಟಡದ 5ನೇ ಮಹಡಿಯಿಂದ ಕೆಳಗೆ ಬಿದ್ದು, ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗುರುವಾರ ನಡೆದಿದೆ.
ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಗೌತಮ್(32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆತನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗೌತಮ್ ಬೆಂಗಳೂರಿನ ಕೆ.ಆರ್.ಪುರಂನ ಆಕಾಶನಗರದ ನಿವಾಸಿಯಾಗಿದ್ದ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಸೆಪ್ಟಂಬರ್ನಲ್ಲಿ ಆತನ ವಿರುದ್ಧ ಸಂಬಂಧಿಕರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪೋಕ್ಸೋ ಕಾಯ್ದೆಯ ಸೆಕ್ಷನ್ 6 ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನದ ನಂತರ ಆತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ಇದ್ದ ಕಾರಣ ಗೌತಮ್ ಮತ್ತು ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಗುರುವಾರ ಪರಪ್ಪನ ಅಗ್ರಹಾರ ಜೈಲಿನಿಂದ ನಗರದ ಮೈಸೂರು ಬ್ಯಾಂಕ್ ಬಳಿಯಿರುವ ಸಿಟಿ ಸಿವಿಲ್ ಕೋರ್ಟ್ಗೆ ಪೊಲೀಸರು ಕರೆತಂದಿದ್ದರು. ಕೋರ್ಟ್ ಆವರಣದ ಮುಂದೆ ನಿಲ್ಲಿಸಿದಾಗ, ಕೈಗೆ ಹಾಕಿದ್ದ ಕೋಳಗಳನ್ನು ಬಿಡಿಸಿಕೊಂಡ ಗೌತಮ್ ಏಕಾಏಕಿ ಕೋರ್ಟ್ ಕಟ್ಟಡದ ಐದನೇ ಮಹಡಿಯಿಂದ ಕೆಳಗೆ ಹಾರಿದ್ದಾನೆ. ಕಟ್ಟಡದ ಮೇಲಿಂದ ಬಿದ್ದ ಪರಿಣಾಮ ಗೌತಮ್ ತಲೆಗೆ ಗಂಭೀರ ಪೆಟ್ಟಾಗಿ, ವಿಪರೀತ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸರು ಸ್ಥಳದಲ್ಲಿ ತಪಾಸಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







