ಹಿಂದುಳಿದ ವರ್ಗದ ನಾಯಕರಿಗೆ ಕಾಂಗ್ರೆಸ್ ಮತ್ತೊಮ್ಮೆ ಐತಿಹಾಸಿಕ ದ್ರೋಹ ಬಗೆದಿದೆ: ಸುನಿಲ್ ಕುಮಾರ್

ಬೆಂಗಳೂರು : ಅಂದು ದೇವರಾಜ್ ಅರಸು ಅವರನ್ನು ಹೀನಾಯವಾಗಿ ಪಟ್ಟದಿಂದ ಇಳಿಸಿದ ರೀತಿಯಲ್ಲಿ ಇಂದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವ ಮೂಲಕ ಹಿಂದುಳಿದ ವರ್ಗಗಳ(ಓಬಿಸಿ) ಸಮುದಾಯದ ರಾಜಕೀಯ ಉತ್ಕರ್ಷವನ್ನು ಕಾಂಗ್ರೆಸ್ ಹೈಕಮಾಂಡ್ ಸಹಿಸುವುದಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಊಳುವವನೇ ಹೊಲದೊಡೆಯ ಕಾಯ್ದೆ ಜಾರಿ ಸೇರಿದಂತೆ ಕರ್ನಾಟಕದಲ್ಲಿ ಕ್ರಾಂತಿಕಾರಿ ಆಡಳಿತ ನೀಡುವ ಮೂಲಕ ಅರಸು ಜನಮನ್ನಣೆ ಗಳಿಸಿದ್ದರು. ಆದರೆ ಅವರ ಜನಪ್ರಿಯತೆಯನ್ನು ಸಹಿಸದ ಇಂದಿರಾ ಗಾಂಧಿ, ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು ಎಂದು ತಿಳಿಸಿದ್ದಾರೆ.
ಅರಸು ನಂತರ ಕರ್ನಾಟಕ ಹಾಗೂ ರಾಷ್ಟ್ರಮಟ್ಟದ ಜನಪ್ರಿಯ ಓಬಿಸಿ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಈಗ ರಾಹುಲ್ ಗಾಂಧಿ ಪದಚ್ಯುತಿಗೊಳಿಸಿದ್ದಾರೆ. ನೂಲಿನಂತೆ ಸೀರೆ ಎಂಬಂತೆ ಗಾಂಧಿ ಕುಟುಂಬದ ಡಿಎನ್‍ಎಯಲ್ಲೇ ಓಬಿಸಿ ನಾಯಕರ ಬಗ್ಗೆ ದ್ವೇಷ, ಈರ್ಷೆ ಹಾಗೂ ಅಸಹನೆ ಅಡಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದೆಡೆ ತಾನು ಓಬಿಸಿ ಸಮುದಾಯದ ಧ್ವನಿಯನ್ನು ಆಲಿಸುವುದಕ್ಕೆ ವಿಳಂಬ ಮಾಡಿದೆ, ಜಾತಿ ಗಣತಿ ನಡೆಸಿ ಓಬಿಸಿ ಸಮುದಾಯಕ್ಕೆ ನ್ಯಾಯ ಕೊಡುತ್ತೇನೆಂದು ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡುವ ರಾಹುಲ್ ಗಾಂಧಿ ಇನ್ನೊಂದೆಡೆ ಓಬಿಸಿ ಸಮುದಾಯದ ರಾಜಕೀಯ ನಾಯಕರನ್ನು ಅಧಿಕಾರದಿಂದ ಎಳೆದು ಕೆಡವುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದ್ದ ಒಬ್ಬನೇ ಒಬ್ಬ ಓಬಿಸಿ ಮುಖ್ಯಮಂತ್ರಿಯನ್ನು ಯಾಕೆ ಪದಚ್ಯುತಿಗೊಳಿಸಿದಿರಿ ? ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಬೇಕಾಗುತ್ತದೆ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.






