ಕಪ್ಪುಪಟ್ಟಿಗೆ ಸೇರಿದ ಸಂಸ್ಥೆಗೆ ಘನ ತ್ಯಾಜ್ಯ ನಿರ್ವಹಣೆಯ ಟೆಂಡರ್ : ಸುನಿಲ್ ಕುಮಾರ್ ಆರೋಪ

ಬೆಂಗಳೂರು : ರಾಜ್ಯದ ‘ಘನ’ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯ ‘ಘನ’ತ್ಯಾಜ್ಯ ವ್ಯವಹಾರವನ್ನು ‘ಘನ’ ಕಾಂಗ್ರೆಸ್ ಸರಕಾರ ನಡೆಸಿದೆ. ಯಾವುದೆ ಸರಕಾರವಾಗಲಿ ಒಂದು ಯೋಜನೆಗೆ ಸಂಬಂಧಪಟ್ಟ ಟೆಂಡರ್ ಅನ್ನು ಮೂವತ್ತು ವರ್ಷಕ್ಕೆ ನೀಡಲು ಸಾಧ್ಯವೇ ? ಅದರಲ್ಲೂ ಕಪ್ಪುಪಟ್ಟಿಗೆ ಸೇರಿದ ಸಂಸ್ಥೆಯೊಂದಕ್ಕೆ ಇಂತಹದೊಂದು ‘ಡೀಲ್’ ಕೊಡುವುದರ ಹಿಂದಿನ ‘ಘನ’ ಉದ್ದೇಶವನ್ನು ಪ್ರಶ್ನೆ ಮಾಡಲೇಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 36 ಸಾವಿರ ಕೋಟಿ ರೂ. ಗಳ ಈ ‘ಘನ’ ವ್ಯವಹಾರದ ಹಿಂದೆ ಕಾಂಗ್ರೆಸ್‍ನ ‘ಘನ’ ವ್ಯಕ್ತಿಗಳು ಭಾಗಿಯಾಗಿರುವುದು ನಿಚ್ಚಳವಾಗಿದ್ದು, ಖುರ್ಚಿ ಬಿಟ್ಟು ಹೋಗುವುದಕ್ಕೆ ಒಂದು ವಾರ ಮೊದಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಸಿದ್ದರಾಮಯ್ಯನವರು ಒಪ್ಪಿಗೆ ನೀಡಿದ್ದಾದರೂ ಏಕೆ ? ಎಂದು ಪ್ರಶ್ನಿಸಿದ್ದಾರೆ.
‘ಬ್ರ್ಯಾಂಡ್’ ಬೆಂಗಳೂರಿನಲ್ಲಿ ನಿರಾತಂಕವಾಗಿ ನಡೆದ ಈ ಹಗರಣದ ‘ಸೇಬಿನ ಎಂಜಲು’ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿರಬಹುದೇ ? ಎಂದು ಸುನಿಲ್ ಕುಮಾರ್ ಕೇಳಿದ್ದಾರೆ.




