ವಿಧಾನ ಪರಿಷತ್ ಸದಸ್ಯತ್ವ ರದ್ದು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಸಲ್ಲಿಸಿದ್ದ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಜಾ

ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವ ರದ್ದತಿಯನ್ನು ಪ್ರಶ್ನಿಸಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ.
ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕೆ 2021ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ನಿಂದ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಚಲಾವಣೆಯಾಗಿದ್ದ 2,410 ಮತಗಳ ಪೈಕಿ 39 ಮತಗಳು ಅಸಿಂಧುವಾಗಿದ್ದವು. 1,188 ಮತಗಳನ್ನು ಪಡೆದಿದ್ದ ಪ್ರಾಣೇಶ್ ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಗಾಯತ್ರಿ ಶಾಂತೇಗೌಡ 1,182 ಮತಗಳನ್ನ ಗಳಿಸಿದ್ದರು.
ಈ ಚುನಾವಣೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗಾಯತ್ರಿ ಶಾಂತೇಗೌಡ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಪಟ್ಟಣ ಪಂಚಾಯತ್ ಗಳ 12 ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದರು. ಅವರಿಗೆ ಮತದಾನಕ್ಕೆ ಅವಕಾಶ ಇಲ್ಲ ಎಂದು ಗಾಯತ್ರಿ ಶಾಂತೇಗೌಡ ವಾದವಾಗಿತ್ತು. ಆ ಸದಸ್ಯರ ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮತಗಳ ಮರು ಎಣಿಕೆ ಮಾಡುವಂತೆ ಜಿಲ್ಲಾಧಿಕಾರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಮತಗಳ ಮರು ಎಣಿಕೆ 2025ರ ಫೆಬ್ರವರಿ 28ರಂದು ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ವರದಿ ಸಲ್ಲಿಸಿದ್ದರು.
ಈ ಮಧ್ಯೆ 2021ರ ವಿಧಾನ ಪರಿಷತ್ ಚುನಾವಣೆಯ ಮತಗಳ ಮರು ಎಣಿಕೆಗೆ ಆದೇಶಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪ್ರಾಣೇಶ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಾಳಯದ ಈ ತೀರ್ಪು ಪ್ರಾಣೇಶ್ ರಿಗೆ ರಾಜಕೀಯವಾಗಿ ಹಿನ್ನಡೆಯಾಗಿ ಪರಿಣಮಿಸಿದೆ. ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದರ ಪರಿಣಾಮವಾಗಿ, ಈಗಾಗಲೇ ಮರುಎಣಿಕೆ ಮಾಡಲಾದ ಮತಗಳ ಫಲಿತಾಂಶ ಈಗ ಘೋಷಿಸುವ ಅನಿವಾರ್ಯ ಎದುರಾಗಿದೆ.






