ಸೇನೆಗೆ ನೇಮಕಾತಿ ಮಾಡದಿದ್ದರೆ ನ್ಯಾಯ ಒದಗಿಸುವುದೇಗೆ? : ಸುರ್ಜೆವಾಲಾ

ಬೆಂಗಳೂರು : ಸೇನೆಗೆ ನೇಮಕಾತಿ ಮಾಡದಿದ್ದರೆ ದೇಶ ಸೇವೆ ಮಾಡುತ್ತಿರುವ ಸೇನಾಪಡೆಗಳಿಗೆ ನ್ಯಾಯ ಒದಗಿಸುವುದೇಗೆ? ಸಶಸ್ತ್ರ ಪಡೆಗಳನ್ನು ಬಲಪಡಿಸಲು ಹೇಗೆ ಸಾಧ್ಯ? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.
ಬುಧವಾರ ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ನಡೆದ ‘ಜೈ ಹಿಂದ್ ಸಭಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಯುಪಡೆಯಲ್ಲಿ 45ರಿಂದ 48 ಏರ್ ಸ್ಕ್ವಾರ್ಡನ್‍ಗಳಿರಬೇಕು. ಆದರೆ, ಈಗ ಸದ್ಯಕ್ಕೆ 24 ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸೇನೆಯ ಅರ್ಧದಷ್ಟು ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ನಾವು ಶತ್ರುಗಳಿಗೆ ಹೇಗೆ ತಕ್ಕ ಶಾಸ್ತಿ ಮಾಡಲು ಸಾಧ್ಯ ಎಂದರು.
1965, 1971ರ ಯುದ್ಧವಿರಲಿ, ಕಾರ್ಗಿಲ್‍ನಿಂದ ಆಪರೇಷನ್ ಸಿಂಧೂರದವರೆಗೆ ಪ್ರತಿ ಬಾರಿ ನಮ್ಮ ಸೇನೆ ಪರಾಕ್ರಮದಿಂದ ಶತ್ರು ಗಳಿಗೆ ತಕ್ಕ ಉತ್ತರ ನೀಡಿದೆ. ಇಂದಿರಾ ಗಾಂಧಿ ನೇತೃತ್ವದಲ್ಲಿ ಪಾಕಿಸ್ತಾನವನ್ನು ನಮ್ಮ ಯೋಧರು ಇಬ್ಭಾಗ ಮಾಡಿದ್ದಾರೆ. ನಮ್ಮ ಸೇನೆ ವಿಶ್ವದ ಅತ್ಯುತ್ತಮ ಸೇನೆಗಳಲ್ಲೊಂದು ಎಂಬುದನ್ನು ಆಪರೇಷನ್ ಸಿಂಧೂರ್‍ನಲ್ಲಿ ಮತ್ತೊಮ್ಮೆ ಸಾಬೀತುಪಡಿಸಲಾಗಿದೆ ಎಂದು ಸುರ್ಜೆವಾಲಾ ಹೇಳಿದರು.
ನಮ್ಮ ಸೇನೆಯ ಕರ್ತವ್ಯಕ್ಕೆ ಇಡೀ ದೇಶ ಒಗ್ಗಟ್ಟಾಗಿ ಬೆಂಬಲ ನೀಡಬೇಕು. ಇದನ್ನು ನಾವು ಮಾಡುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಈ ‘ಜೈ ಹಿಂದ್ ಸಭಾ’ ಕಾರ್ಯಕ್ರಮದ ವೇದಿಕೆಯಿಂದ ನಾವೆಲ್ಲರೂ ಎತ್ತಬೇಕಿದೆ. ಭಾರತೀಯ ಸೇನೆಯಲ್ಲಿ ಎಷ್ಟು ಉದ್ಯೋಗಗಳು ಖಾಲಿ ಇವೆ ಎಂಬುದನ್ನು ನಮ್ಮ ಸದಸ್ಯರ ಮೂಲಕ ಸಂಸತ್ತಿನಲ್ಲಿ ಪ್ರಶ್ನೆ ಕೇಳಲಾಯಿತು. 2023ರ ನಂತರ ಕೇಂದ್ರ ಸರಕಾರ ಈ ಕುರಿತ ಅಂಕಿ ಅಂಶಗಳನ್ನು ನೀಡುವುದನ್ನು ನಿಲ್ಲಿಸಿದೆ ಎಂದು ಸುರ್ಜೆವಾಲಾ ದೂರಿದರು.
ಭಾರತೀಯ ಸೇನೆಯಲ್ಲಿ ಆಗ 1.22 ಲಕ್ಷ ಉದ್ಯೋಗಗಳು ಖಾಲಿ ಇದ್ದವು. ಈಗ ಅದು 1.75 ಲಕ್ಷಕ್ಕೆ ಏರಿಕೆಯಾಗಿದೆ ಎಂದು ರಕ್ಷಣಾ ವಲಯದ ತಜ್ಞರು ಅಂದಾಜಿಸಿದ್ದಾರೆ. ಇದರಲ್ಲಿ ಸುಮಾರು 25 ಸಾವಿರದಷ್ಟು ಅಧಿಕಾರಿ ಮಟ್ಟದ ಹುದ್ದೆಗಳು ಖಾಲಿ ಇವೆ ಎಂದು ಸುರ್ಜೆವಾಲಾ ವಿವರಿಸಿದರು.
ನಮ್ಮ ದೇಶ ಚೀನಾ ಹಾಗೂ ಪಾಕಿಸ್ತಾನದ ದೇಶಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇರುವುದರಿಂದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಮೌಂಟೇನ್ ಸ್ಟ್ರೈಕ್ ಕಾಪ್ರ್ಸ್ ಅನ್ನು ಸ್ಥಾಪಿಸಲು ತೀರ್ಮಾನಿಸಿತ್ತು. ಆಪರೇಷನ್ ಸಿಂಧೂರದಿಂದ ಚೀನಾ ಹೇಗೆ ಪಾಕಿಸ್ತಾನಕ್ಕೆ ನೆರವು ನೀಡುತ್ತಿತ್ತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೂ, ಹಿಂದಿನ 11 ವರ್ಷಗಳಲ್ಲಿ ಮೌಂಟೇನ್ ಸ್ಟ್ರೈಕ್ ಕಾಪ್ರ್ಸ್ ಅನ್ನು ಯಾಕೆ ಸ್ಥಾಪಿಸಿಲ್ಲ? ಕೇಂದ್ರ ಸರಕಾರ ಇದನ್ನು ಯಾವಾಗ ಸ್ಥಾಪಿಸಲಿದೆ ಎಂದು ಸುರ್ಜೆವಾಲಾ ಪ್ರಶ್ನಿಸಿದರು.







