ಕಾಂಗ್ರೆಸ್ ಗೆಲುವು ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ : ಸುರ್ಜೆವಾಲ

ರಣದೀಪ್ ಸಿಂಗ್ ಸುರ್ಜೆವಾಲ | PC : PTI
ಬೆಂಗಳೂರು : ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಶಾಮನೂರು ಬಿಜೆಪಿಯನ್ನು ಮಣಿಸಿ ವಿಜಯಮಾಲೆ ಧರಿಸಿದ್ದಾರೆ. ಈ ಫಲಿತಾಂಶವು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಜನತೆ ನೀಡಿದ ಸಮ್ಮತಿಯಾಗಿದೆ. ಹೀಗಾಗಿ ಇದು ಕಾಂಗ್ರೆಸ್ ಗ್ಯಾರಂಟಿಗಳ ಜಯ, ಪ್ರತಿಯೊಬ್ಬ ಕನ್ನಡಿಗನ ಜಯ, ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ, ಕಾಂಗ್ರೆಸ್ ಕಾರ್ಯಕರ್ತರ ಜಯ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಬಣ್ಣಿಸಿದ್ದಾರೆ.
ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರ ನಾಯಕತ್ವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಸಂಘಟಿತ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ಹೇಳಿದ್ದಾರೆ.
ಇನ್ನು ನೆಲಮಟ್ಟದಲ್ಲಿ ಶ್ರಮಿಸಿದ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳ ಶ್ರಮಕ್ಕೆ ಸಿಕ್ಕ ಜಯ. ಕೆಳಮಟ್ಟದಲ್ಲಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಅಭಿನಂದನೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.




