ಪೆಟ್ರೋಲ್ ಪಂಪ್ಗಳಲ್ಲಿ 200 ಲೀ.ಗಿಂತ ಹೆಚ್ಚಿನ ಬಲ್ಕ್ ಡೀಸೆಲ್ ಮಾರಾಟಕ್ಕೆ ನಿರ್ಬಂಧ: ಸುರ್ಜೇವಾಲ ಆಕ್ರೋಶ

ರಣದೀಪ್ ಸಿಂಗ್ ಸುರ್ಜೆವಾಲಾ (Photo: PTI)
ಬೆಂಗಳೂರು : ಕೇಂದ್ರ ಸರಕಾರವು ಪೆಟ್ರೋಲ್ ಪಂಪ್ಗಳಲ್ಲಿ 200 ಲೀ.ಗಿಂತ ಹೆಚ್ಚಿನ ಬಲ್ಕ್ ಡೀಸೆಲ್ ಮಾರಾಟಕ್ಕೆ ನಿರ್ಬಂಧ ಹೇರಿದ್ದು, ದೇಶದ ಇತಿಹಾಸದಲ್ಲಿಯೇ ಜನಸಾಮಾನ್ಯರು, ರೈತರು, ವೇತನ ವರ್ಗ, ಸಾರಿಗೆದಾರರು, ಸಣ್ಣ ಉದ್ಯಮದವರಿಗೆ ಬಿಜೆಪಿ ಅತ್ಯಂತ ದುಬಾರಿ ಪಕ್ಷವೆಂಬುದನ್ನು ಈ ಮೂಲಕ ಸಾಬೀತುಪಡಿಸುತ್ತಿರುವಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, 2026ರ ಜೂ.12ರಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಒಂದು ಆದೇಶಹೊರಡಿಸಿದ್ದು, ಇನ್ನು ಮುಂದೆ 200ಲೀ.ಗಿಂತ ಹೆಚ್ಚು ಡೀಸೆಲ್ ಅನ್ನು ಪೆಟ್ರೋಲ್ ಪಂಪ್ಗಳಲ್ಲಿ ಮಾರಾಟ ಮಾಡದಂತೆ ನಿರ್ಬಂಧಿಸಲಾಗಿದೆ. ನಿಮಗೆ 200ಲೀ. ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಡೀಸೆಲ್ ಬೇಕಾದಲ್ಲಿ ನೀವು ‘ಬಲ್ಕ್ ಬೈಯರ್' ಬಳಿ ದೊಡ್ಡ ಪ್ರಮಾಣದ ಡೀಸೆಲ್ ಖರೀದಿಸಬೇಕು.
ಇದಕ್ಕೆ ಕಾರಣ, ಪೆಟ್ರೋಲ್ ಪಂಪ್ನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 95 ರೂ.ನಿಂದ 97ರೂ. ಇದೆ. ಆದರೆ, ಬಲ್ಕ್ ಬೈಯರ್ ಬಳಿ ಖರೀದಿಸುವಾಗ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 135ರಿಂದ 140ರೂ. ಇದೆ. ಅಂದರೆ ಪ್ರತಿ ಲೀಟರ್ ಗೆ 40 ರೂ.ಗಳ ವ್ಯತ್ಯಾಸ. ಕೇಂದ್ರದ ಈ ತೀರ್ಮಾನ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದನ್ನು ನೋಡುವುದಾದರೆ, ಮೊದಲನೆಯದಾಗಿ ಇಲ್ಲಿ ಹೊಡೆತ ಬೀಳುವುದು ರೈತನಿಗೆ ಎಂದು ವಿಶ್ಲೇಷಿಸಿದ್ದಾರೆ.
ಬಿತ್ತನೆಯ ಕಾಲ ಆರಂಭವಾಗುತ್ತಿದೆ. ಪ್ರತಿ ರೈತ ಒಂದು ಎಕರೆಗೆ ಸುಮಾರು 300ಲೀ.ಡೀಸೆಲ್ ಬಳಸುತ್ತಾನೆ. ಭಾರತದಲ್ಲಿ ಸರಾಸರಿ ಒಬ್ಬ ರೈತನಿಗೆ 5ಎಕರೆ ಭೂಮಿ ಇದ್ದರೆ ಒಂದು ಬೆಳೆಗೆ ಕನಿಷ್ಠ 1,500 ಲೀ. ಡೀಸೆಲ್ ಬೇಕು. ಇದು ‘ಬಲ್ಕ್ ಖರೀದಿ'ಯಾಗುತ್ತದೆ. ಹೀಗಾಗಿ, ಈಗ ರೈತರಿಗೆ ಡೀಸೆಲ್ ಬೆಲೆ ಪ್ರತಿ ಲೀ.ಗೆ 40 ರೂ.ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ನಗರವಾಸಿಗಳು ಹಾಗೂ ಅದರಲ್ಲೂ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವವರಿಗೂ ಈ ಬರೆ ಬೀಳಲಿದೆ. ಈ ವರ್ಗದ ಜನ ದೈನಂದಿನ ವಿದ್ಯುತ್ ಅಗತ್ಯಕ್ಕಾಗಿ ಜನರೇಟರ್ ಗಳನ್ನು ಬಳಸುತ್ತಾರೆ. ಇವರೂ ಬಲ್ಕ್ ಖರೀದಿದಾರರು. ಪ್ರತಿದಿನ 2ಸಾವಿರದಿಂದ 5ಸಾವಿರ ಲೀ.ಡೀಸೆಲ್ ಖರೀದಿಸುತ್ತಾರೆ. ಇವರಿಗೂ ಲೀಟರ್ ಗೆ 40 ರೂ.ಹೆಚ್ಚಾಗಲಿದೆ. ಇದರಿಂದ ಈ ವರ್ಗದ ಜನರ ದೈನಂದಿನ ವಿದ್ಯುತ್ ಬಳಕೆಯ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ವೇತನ ಮತ್ತು ಮಧ್ಯಮ ವರ್ಗಕ್ಕೆ ಆಗಲಿರುವ ಪರಿಸ್ಥಿತಿ ಇದೇ ಆಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
‘ಇನ್ನು ಸಾಮಾನ್ಯ ಜನರ ಬಗ್ಗೆ ಹೇಳುವುದಾದರೆ, ಸಾರಿಗೆ ವೆಚ್ಚವೂ ಹೆಚ್ಚಾಗಲಿದೆ. ಒಂದು ಬಸ್ನ ಟ್ಯಾಂಕ್ನಲ್ಲಿ 200 ಲೀ.ಗಿಂತ ಹೆಚ್ಚು ಇಂಧನ ಹಿಡಿದರೆ. ಆ ಬಸ್ಗೆ ಪ್ರತಿ ಲೀ.ಗೆ 40ರೂ. ಹೆಚ್ಚು ನೀಡಿ ಡೀಸೆಲ್ ಖರೀದಿಸಿದರೆ, ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲವೇ?. 500ರಿಂದ 1ಸಾವಿರ ಲೀ. ಟ್ಯಾಂಕ್ ಹೊಂದಿರುವ ಟ್ರಕ್ ಚಾಲಕರು, 40 ರೂ.ಹೆಚ್ಚು ನೀಡಿ ಡೀಸೆಲ್ ಖರೀದಿಸಿದಾಗ ನೀವು, ನಾವು ಬಳಸುವ ದಿನಬಳಕೆ ವಸ್ತುಗಳ ಸಾರಿಗೆ ವೆಚ್ಚ ಸಹಜವಾಗಿಯೇ ಹೆಚ್ಚಾಗುತ್ತದೆ. ಅಂತಿಮವಾಗಿ ಇದರ ಬೆಲೆಯನ್ನು ಸಾಮಾನ್ಯ ಜನರೇ ತೆರಬೇಕು ಎಂದು ಅವರು ತಿಳಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಈ ತೀರ್ಮಾನದ ಬಿಸಿ ತಟ್ಟಲಿದೆ. ವಿದ್ಯುತ್ ಪೂರೈಕೆಯ ಒಂದು ನಿರ್ದಿಷ್ಟ ವೇಳಾಪಟ್ಟಿ ಇರುತ್ತದೆ, ಅದರಂತೆ ಅವರಿಗೆ 12, 14, 18ಗಂಟೆ ವಿದ್ಯುತ್ ಸಿಗುತ್ತದೆ. ಅದಕ್ಕಿಂತ ಹೆಚ್ಚು ಬೇಕಾದಾಗ ಅವರು ಜನರೇಟರ್ಗಳನ್ನೇ ಅವಲಂಬಿಸಬೇಕಾಗುತ್ತದೆ. ಇವರೂ ಬಲ್ಕ್ ಖರೀದಿದಾರರಾಗಿದ್ದಾರೆ. ಕೈಗಾರಿಕೆಯವರು 200ಲೀ.ಗಿಂತ ಹೆಚ್ಚಿನ ಅಂದರೆ 5ಸಾವಿರ, 10 ಸಾವಿರ ಅಥವಾ 15 ಸಾವಿರ ಲೀ. ಡೀಸೆಲ್ ಖರೀದಿಸುತ್ತಾರೆ. ಇವರಿಗೂ ಲೀಟರ್ಗೆ 40 ರೂ.ಹೆಚ್ಚಾದಾಗ, ಸಾಮಾನ್ಯ ಜನರ ಬಳಕೆಗೆ ತಯಾರಾಗುವ ವಸ್ತುವಿನ ಬೆಲೆಯೂ ಹೆಚ್ಚಲಿದೆ ಎಂದು ಅವರು ಎಚ್ಚರಿಸಿದ್ದಾರೆ.
‘ಆದರೆ, ಬಿಜೆಪಿ ಇದನ್ನು ಜನರರಿಂದ ಮರೆಮಾಚುತ್ತಿದೆ. ಈ ದೈನಂದಿನ ದುಬಾರಿ ವಿರೋಧಿಸುವ ಸಮಯ ಬಂದಿದೆ. ಸಾಮಾನ್ಯ ಜನರ ಬಜೆಟ್ ಮೇಲೆ ದೈನಂದಿನ ಹೊರೆಯನ್ನು ಖಂಡಿಸುವ ಸಮಯ ಬಂದಿದೆ. ನೀವು ನಿಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬ ಬಿಜೆಪಿ ನಾಯಕರು, ಕಾರ್ಪೊ ರೇಟರ್, ಶಾಸಕರು, ಸಂಸದರು, ಬಿಜೆಪಿ ಸಚಿವರನ್ನು ಪ್ರಶ್ನಿಸುವ ಸಮಯ ಬಂದಿದೆ. ಬಿಜೆಪಿ ಸರಕಾರವನ್ನು ಪ್ರಶ್ನಿಸಲು ಪ್ರಾರಂಭಿಸಬೇಕಿದೆ. ಇದೀಗ ಇದು ಕೇವಲ ರಾಜಕೀಯ ಪಕ್ಷಗಳ ನಡುವಿನ ಹೋರಾಟವಲ್ಲ. ಇದು ಸಾಮಾನ್ಯಜನರ ಬಜೆಟ್ ಉಳಿವಿನ ಹೋರಾಟ’ ಎಂದು ಅವರು ತಿಳಿಸಿದ್ದಾರೆ.






