ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಈಡಿ ದಾಳಿ; ಕಾಂಗ್ರೆಸ್ ಎಂದಿಗೂ ತಲೆಬಾಗುವುದಿಲ್ಲ: ರಣದೀಪ್ಸಿಂಗ್ ಸುರ್ಜೇವಾಲ

ರಣದೀಪ್ ಸಿಂಗ್ ಸುರ್ಜೆವಾಲಾ (Photo: PTI)
ಬೆಂಗಳೂರು : ‘ಬಿಜೆಪಿಯವರು ಒಂದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲಿ, ಕಾಂಗ್ರೆಸ್ ಪಕ್ಷವು ಎಂದಿಗೂ ತಲೆಬಾಗುವುದಿಲ್ಲ, ನಾವು ಯಾವುದಕ್ಕೂ ಅಂಜುವುದಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳನ್ನು ಮುಂದುವರಿಸಿಕೊಂಡು ಜನಸೇವೆಯನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಈಡಿ ದಾಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಸರಕಾರ ಅಡ್ಡದಾರಿಯಲ್ಲಿ ನಡೆಸುತ್ತಿರುವ ರಾಜಕೀಯ ಪ್ರೇರಿತ ದುರುದ್ದೇಶಪೂರಿತ ದಾಳಿಗಳು ಪದೇ ಪದೇ ಬಳಸುತ್ತಿರುವ ಸವೆದುಹೋದ ತಂತ್ರವಷ್ಟೇ. ಇಂತಹ ಕೃತ್ಯಗಳು ಕನ್ನಡಿಗರ ಸೇವೆ ಮಾಡುವ ನಮ್ಮ ಸಂಕಲ್ಪವನ್ನು ಎಂದಿಗೂ ಕುಗ್ಗಿಸಲು ಅಥವಾ ಹೆದರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
‘ಪರಿಶಿಷ್ಟ ಪಂಗಡದ(ಎಸ್ಟಿ) ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರ ಮೇಲಿನ ರಾಜಕೀಯ ದಾಳಿ ಹಾಗೂ ಈಡಿ ದಾಳಿಗಳು, ಸೋಲಿನ ಭೀತಿಯಲ್ಲಿರುವ ಬಿಜೆಪಿ ನಡೆಸುತ್ತಿರುವ ರಾಜಕೀಯ ಸೇಡಿನ ರಾಜಕಾರಣಕ್ಕೆ ಮತ್ತೊಂದು ಪ್ರತ್ಯಕ್ಷ ಉದಾಹರಣೆಯಾಗಿದೆ. ಮೂರು ವರ್ಷಗಳಲ್ಲಿ, ಸೋತು ಧೂಳೀಪಟವಾಗಿರುವ ಬಿಜೆಪಿ/ಜೆಡಿಎಸ್ ಕೂಟ ನಡೆಸಿದ ಸೇಡಿನ ರಾಜಕಾರಣದ ಪಟ್ಟಿ ಹೀಗಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.
ಈಡಿ ಸಂಸ್ಥೆಯು ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರ ಮೇಲೆ ದಾಳಿ ನಡೆಸಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸ್ತುತ ಡಿಸಿಎಂ ಡಾ.ಜಿ. ಪರಮೇಶ್ವರ್, ಸಚಿವ ಬಿ.ಝೆಡ್.ಝಮೀರ್ ಅಹಮದ್ ಖಾನ್, ಸಂಸದ ಇ.ತುಕಾರಾಮ್, ಸಚಿವ ಬಿ. ನಾಗೇಂದ್ರ, ಶಾಸಕರಾದ ಬಸನಗೌಡ ದದ್ದಲ್, ಸತೀಶ್ ಸೈಲ್, ಎನ್.ಎ.ಹಾರಿಸ್, ನಾರಾ ಭರತ್ ರೆಡ್ಡಿ, ಎಸ್.ಎ.ನ್.ಸುಬ್ಬಾರೆಡ್ಡಿ, ಕೆ.ಸಿ.ವೀರೇಂದ್ರ ಸೇರಿದಂತೆ ಹಲವರ ಮೇಲೆ ದಾಳಿ ನಡೆಸಿತ್ತು.
ಇನ್ನೊಂದೆಡೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕ ರೇಣುಕಾಚಾರ್ಯ ಮತ್ತು ಕುಪ್ರಸಿದ್ಧ ಜನಾರ್ದನ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಲ್ಲಿಸಿರುವ ಪ್ರಾಸಿಕ್ಯೂಷನ್ ತನಿಖೆ ರಾಜ್ಯಪಾಲರ ಮುಂದೆ ಇನ್ನೂ ಬಾಕಿ ಉಳಿದಿವೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.






