ಶಿಕ್ಷಣ ಪದವಿಗಾಗಿ ಮಾತ್ರವಲ್ಲ, ಸಮಾಜ ರೂಪಿಸುವ ಶಕ್ತಿಯಾಗಬೇಕು : ಸೈಯದ್ ಬ್ಯಾರಿ
ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ, ಪದವಿ ಪ್ರದಾನ ಸಮಾರಂಭ

ಬೆಂಗಳೂರು : ಶಿಕ್ಷಣವು ಕೇವಲ ಪದವಿ ಹಾಗೂ ಉದ್ಯೋಗ ಪಡೆಯುವ ಸಾಧನವಲ್ಲ, ಅದು ವ್ಯಕ್ತಿತ್ವ ನಿರ್ಮಾಣ, ನಾಯಕತ್ವದ ಗುಣ ಬೆಳೆಸುವ ಮತ್ತು ಸಮಾಜದ ಜವಾಬ್ದಾರಿಯನ್ನು ಅರಿತುಕೊಳ್ಳುವ ಶಕ್ತಿಯಾಗಬೇಕು ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.
ಶನಿವಾರ ನಗರದ ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪದವಿ ಶಿಕ್ಷಣದ ಅಂತ್ಯವಲ್ಲ, ಜೀವನದ ನೈಜ ಪಾಠಗಳನ್ನು ಕಲಿಯುವ ಹೊಸ ಅಧ್ಯಾಯದ ಆರಂಭವಾಗಿದೆ ಎಂದರು.
‘ಯಶಸ್ಸನ್ನು ವಿನಯದಿಂದ ಸ್ವೀಕರಿಸಿ, ವೈಫಲ್ಯವನ್ನು ಧೈರ್ಯದಿಂದ ಎದುರಿಸಿ. ಜೀವನದಲ್ಲಿ ಕನಸು, ಶಿಸ್ತು ಹಾಗೂ ದೃಢಸಂಕಲ್ಪ ಬಹಳ ಮುಖ್ಯ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ನೂತನ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಶುಭ ಹಾರೈಸಿದರು. ನಾಯಕತ್ವವೆಂದರೆ ಅಧಿಕಾರವಲ್ಲ, ಜವಾಬ್ದಾರಿ. ವಿದ್ಯಾರ್ಥಿ ನಾಯಕರು ತಮ್ಮ ಸಹಪಾಠಿಗಳ ಸಮಸ್ಯೆಗಳನ್ನು ಆಲಿಸಿ, ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಮಾದರಿಯಾಗಬೇಕು ಎಂದರು.
ಮಹಿಳಾ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಸೈಯದ್ ಬ್ಯಾರಿ ಅವರು, ಶಿಕ್ಷಣ ಪಡೆದ ಮಹಿಳೆ ತನ್ನ ಕುಟುಂಬವನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಬಲಪಡಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಯುವತಿಯರು ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತವಾಗದೆ ಉದ್ಯಮ, ಸಂಶೋಧನೆ, ವೃತ್ತಿಪರ ಕ್ಷೇತ್ರ ಹಾಗೂ ಸಾಮಾಜಿಕ ನಾಯಕತ್ವದಲ್ಲೂ ತಮ್ಮ ಛಾಪು ಮೂಡಿಸುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬದಲಾವಣೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಹೊಸ ಕೌಶಲಗಳನ್ನು ನಿರಂತರವಾಗಿ ಕಲಿಯಬೇಕು. ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವೀಯ ಮೌಲ್ಯಗಳು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಕಳೆದುಕೊಳ್ಳಬಾರದು ಎಂದು ಅವರು ಹೇಳಿದರು.
ಪದವಿ ನಿಮ್ಮ ಮೊದಲ ಬಾಗಿಲನ್ನು ತೆರೆಯಬಹುದು; ಆದರೆ ನಿಮ್ಮ ಜ್ಞಾನ, ವ್ಯಕ್ತಿತ್ವ ಮತ್ತು ಬದ್ಧತೆ ನೀವು ಎಷ್ಟು ದೂರ ಸಾಗುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ ಎಂದು ಸೈಯದ್ ಬ್ಯಾರಿ ತಿಳಿಸಿದರು.
ಸಮಾರಂಭದಲ್ಲಿ ಬೆಂಗಳೂರು ಜಲ ಮಂಡಳಿ ಮುಖ್ಯ ಆಡಳಿತಾಧಿಕಾರಿ ಆಶಾ ಪರ್ವೀನ್, ಸೆಂಟ್ರಲ್ ಮುಸ್ಲಿಮ್ ಅಸೋಸಿಯೇಷನ್(ಸಿಎಂಎ) ಅಧ್ಯಕ್ಷ ಫಾರೂಕ್ ಮುಹಮ್ಮದ್, ಕಾರ್ಯದರ್ಶಿ ಅಫ್ತಾರ್ ಸೈಯದ್ ಮುರ್ತುಝಾ ಹುಸೇನ್, ಜಂಟಿ ಕಾರ್ಯದರ್ಶಿ ಹುಸೇನ್ ಶರೀಫ್, ಅಬ್ಬಾಸ್ ಖಾನ್ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಎಸ್.ವಿದ್ಯಾ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಆಯಿಷಾ ರುಕ್ಸಾರ್, ಉಪ ಪ್ರಾಂಶುಪಾಲೆ ಡಾ.ಸೈದಾ ತಬಸ್ಸುಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






