ಉಗ್ರರ ನಂಟು ಆರೋಪ: ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಎಎಸ್ಸೈ ಸಹಿತ ಮೂವರ ಸೆರೆ
ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಣೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.9: ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಅರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಸಶಸ್ತ್ರ ಮೀಸಲು ಪಡೆಯ ಎಎಸ್ಸೈ ಚಾಂದ್ ಪಾಷಾ ಸೇರಿದಂತೆ ಮೂವರನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳು, ಬಂಧಿಸಿದ್ದಾರೆ.
ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಬೆಂಗಳೂರು, ಕೋಲಾರ ಸೇರಿ ಐದು ಸ್ಥಳಗಳಲ್ಲಿ ಎನ್ ಐಎ ಅಧಿಕಾರಿಗಳು ಶೋಧ ನಡೆಸಿದಾಗ ಪತ್ತೆಯಾಗಿದ್ದ ಡಿಜಿಟಲ್ ಸಾಕ್ಷ್ಯಗಳು, ನಗದು, ಚಿನ್ನ ಸೇರಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾರ್ಯ ನಿರ್ವಹಿಸುವ ಮನೋವೈದ್ಯ ನಾಗರಾಜ್, ಎಎಸ್ಸೈ ಚಾಂದ್ ಪಾಷಾ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಎಂಬಾತನ ತಾಯಿ ಅನೀಸ್ ಫಾತಿಮಾ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಡಾ.ನಾಗರಾಜ್ ನಾಲ್ಕು ವರ್ಷದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಲಷ್ಕರ್ ಎ ತ್ವಯ್ಬಾ ಸಂಘಟನೆಯ ದಕ್ಷಿಣ ಭಾರತದ ಮುಖ್ಯಸ್ಥ ಟಿ.ನಾಸಿರ್, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಹಾಗೂ ಇತರ ಕೈದಿಗಳಿಗೆ ಮೊಬೈಲ್ ಫೋನ್ ಗಳನ್ನು ಪೂರೈಸುತ್ತಿದ್ದ ಆರೋಪ ಎದುರಿಸುತ್ತಿದ್ದರೆ, ಅವರಿಗೆ ಸಹಾಯಕಿ ಪವಿತ್ರಾ ಸಹಾಯ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಗೊತಾಗಿದೆ.
ಎಎಸ್ಸೈ ಚಾಂದ್ ಪಾಷಾ 2022ರಿಂದ ಟಿ.ನಾಸಿರ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಆರೋಪಿಯನ್ನು ಬೆಂಗಳೂರು, ಕೇರಳ ಹಾಗೂ ಇತರೆ ರಾಜ್ಯಗಳ ಕೋರ್ಟ್ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲವು ವ್ಯಕ್ತಿಗಳು ಹಾಗೂ ಮುಂಗಡವಾಗಿ ಟಿ.ನಾಸಿರ್ ಗೂ ನೀಡುತ್ತಿದ್ದರು. ಅದಕ್ಕಾಗಿ ಸಂಘಟನೆಯಿಂದ ಹಣ ಪಡೆಯುತ್ತಿದ್ದರು ಎಂಬ ಆರೋಪವಿದೆ. ಜುನೈದ್ ತಾಯಿ ಅನೀಸ್ ಫಾತಿಮಾ, ಜೈಲಿನಲ್ಲಿರುವ ಟಿ.ನಾಸಿರ್ ಎಲ್ಇಟಿಗೆ ಸಂಘಟನೆ ಮಾಡಲು ನಿಧಿ ಸಂಗ್ರಹ ಹಾಗೂ ಇತರ ವಿಚಾರಗಳ ಬಗ್ಗೆ ನೀಡುತ್ತಿದ್ದ ಮಾಹಿತಿಯನ್ನು ವಿದೇಶದಲ್ಲಿರುವ ತನ್ನ ಮಗನಿಗೆ ಅನೀಸ್ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.







