ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಜ್ಞಾನಿ, ವಿದ್ಯಾರ್ಥಿಗಳ ಪಾತ್ರ ಮುಖ್ಯ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಕೃಷಿ ವಿಶ್ವವಿದ್ಯಾನಿಲಯದ 59ನೇ ಘಟಿಕೋತ್ಸವ ಸಮಾರಂಭ

ಬೆಂಗಳೂರು : ನಮ್ಮ ದೇಶವು ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದ್ದು, ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳ ಪಾತ್ರವು ಮುಖ್ಯವಾಗಿದೆ ಎಂದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ವತಿಯಿಂದ 59ನೇ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕೃಷಿ ಉತ್ಪಾದನೆಯಲ್ಲಿ ಬೇಡಿಕೆಯನ್ನು ಪೂರೈಸಲು ಹೊಸ ಆಯ್ಕೆಗಳನ್ನು ಉತ್ತೇಜಿಸುವ ಅವಶ್ಯಕತೆಯಿದೆ ಎಂದರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿದ ಸುಧಾರಿತ ಬೀಜಗಳು ಮತ್ತು ಸುಧಾರಿತ ತಳಿಗಳು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಡ್ರೋನ್ ತಂತ್ರಜ್ಞಾನ, ಉಪಗ್ರಹ ಚಿತ್ರಣ ಮತ್ತು ಸ್ಮಾರ್ಟ್ ನೀರಾವರಿ ವ್ಯವಸ್ಥೆಗಳ ಬಳಕೆಯಿಂದ ಉತ್ಪಾದನೆಯನ್ನು ಹೆಚ್ಚಾಗುತ್ತಿದೆ. ಹಾಗೆಯೇ ನೀರಿನ ಬಳಕೆಯನ್ನು ಕಡಿಮೆಯಾಗುತ್ತಿದೆ ಎಂದು ಅವರು ತಿಳಿಸಿದರು.
ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣು, ನೀರು ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾವಯವ ಕೃಷಿ, ನೈಸರ್ಗಿಕ ಕೃಷಿ, ಕಡಿಮೆ ನೀರಿನಿಂದ ಹೆಚ್ಚು ಇಳುವರಿ ಮತ್ತು ಸುರಕ್ಷಿತ ಆಹಾರವನ್ನು ಉತ್ಪಾದಿಸಲು ಪರಿಸರ ಸ್ನೇಹಿ ಕೃಷಿಯಂತಹ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಮಾತನಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯದ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿನ ಸುಸ್ಥಿರತೆಗೆ ನಾಂದಿ ಹಾಡಿದೆ ಎಂದರು.
ವಿಶ್ವವಿದ್ಯಾನಿಲಯವು ದೇಶದ ಕೃಷಿ ಇತಿಹಾಸದಲ್ಲಿ ಹಲವಾರು ಮೈಲುಗಲ್ಲು ದಾಖಲಿಸಿದ್ದು, ಸುಧಾರಿತ ಸಮಗ್ರ ಕೃಷಿ ಪದ್ಧತಿಗಳು, ಉತ್ತಮ ತಳಿಗಳು, ಒಣಬೇಸಾಯ ತಾಂತ್ರಿಕತೆಗಳು, ಸುಸ್ಥಿರ ನೀರು, ಪೋಷಕಾಂಶ, ಕಳೆ, ರೋಗ ಹಾಗೂ ಕೀಟ ನಿರ್ವಹಣಾ ಪದ್ಧತಿಗಳು, ಕೃಷಿ ಯಾಂತ್ರೀಕರಣ, ಪರ್ಯಾಯ ಭೂ ಬಳಕೆ ಹಾಗೂ ಭೂಸುಧಾರಣಾ ಕ್ರಮಗಳಿಂದ ಕೃಷಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ಮಣ್ಣಿನ ಆರೋಗ್ಯ ಸುಧಾರಣೆ, ಹವಾಮಾನ ತಳಿಗಳ ಅಭಿವೃದ್ಧಿ, ಗುಣಮಟ್ಟದ ಬೀಜ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ರಾಸಾಯನಿಕ ಮುಕ್ತ ಪರಿಕರಗಳಿಗೆ ಮಹತ್ವ ನೀಡಬೇಕಿದ್ದು, ಈ ದಿಸೆಯಲ್ಲಿ ರಾಜ್ಯದ ಉತ್ಪಾದನೆ ಹೆಚ್ಚಿಸಲು ಹನಿ ನೀರಾವರಿ ಯೋಜನೆಗೆ ಎರಡು ವರ್ಷದಲ್ಲಿ 1,075 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ. ಕೋಯ್ಲೋತ್ತರ ತಂತ್ರಜ್ಞಾನಗಳ ಬಳಕೆಗೆ ‘ಹಾರ್ವೆಸ್ಟರ್ ಹಬ್’ ಯೋಜನೆ ಜಾರಿಗೆ ತಂದು, ಕಳೆದ ಎರಡು ವರ್ಷಗಳಲ್ಲಿ ಒಟ್ಟು 344 ಹೈಟೆಕ್ ಹಾರ್ವೆಸ್ಟರ್‍ಗಳನ್ನು ಸಹಾಯಧನದಲ್ಲಿ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ನವದಿಲ್ಲಿಯ ಇಫೋ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಎಸ್. ಅವಸ್ಥಿ ಮಾತನಾಡಿ, ಡಾ.ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ಹಸಿರು ಕ್ರಾಂತಿಯು ಹೆಚ್ಚಿನ ಇಳುವರಿ ನೀಡುವ ಗೋಧಿ ಮತ್ತು ಭತ್ತದ ತಳಿಗಳು, ರಾಸಾಯನಿಕ ಗೊಬ್ಬರಗಳು ಮತ್ತು ನವೀನ ನೀರಾವರಿ ಪದ್ದತಿಯನ್ನು ಪರಿಚಯಿಸಿತು. ಇದು ಭಾರತವು ದೀರ್ಘಕಾಲದ ಆಹಾರ ಕೊರತೆಯನ್ನು ನಿವಾರಿಸಲು ಮತ್ತು ಆಹಾರ ಭದ್ರತೆಯನ್ನು ಸಾಧಿಸಲು ಸಹಾಯ ಮಾಡಿದೆ ಎಂದರು.
ಸಮಾರಂಭದಲ್ಲಿ ನಿವೃತ್ತ ಐ.ಎ.ಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಮತ್ತು ಕೃಷಿ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಯೋಗೇಂದ್ರ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
2023-24 ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಒಟ್ಟಾರೆ 1,271 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಯಿತು. ಡಾಕ್ಟರ್ ಆಫ್ ಫಿಲಾಸೊಫಿ ಪದವಿಯಲ್ಲಿ ಒಟ್ಟು 30 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ಇದೇ ವೇಳೆ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ. ಸುರೇಶ್, ಆಡಳಿತ ಮಂಡಳಿಯ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು, ವಿಶ್ರಾಂತ ಕುಲಪತಿಗಳು ಹಾಗೂ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.







