ನನ್ನ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರ: ಅನಿತಾ ಕುಮಾರಸ್ವಾಮಿ

ಅನಿತಾ ಕುಮಾರಸ್ವಾಮಿ
ಬೆಂಗಳೂರು : ‘ಪವಿತ್ರ ನವರಾತ್ರಿಯ ದಿನಗಳಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥರು ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾದದ್ದು, ಸಂಪೂರ್ಣ ಕಟ್ಟುಕಥೆ ಮತ್ತು ದುರುದ್ದೇಶಪೂರಿತ ಸೃಷ್ಟಿ’ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸುದೀರ್ಘ ಕಾಲದಿಂದ ಸಾರ್ವಜನಿಕ ಜೀವನದಲ್ಲಿರುವ ನನ್ನ ಕಳಂಕ ರಹಿತ ಚಾರಿತ್ರ್ಯಕ್ಕೆ ಧಕ್ಕೆ ತರಲು ಧರ್ಮ ಮತ್ತು ಸತ್ಯದ ಹಬ್ಬವಾದ ನವರಾತ್ರಿಯ ಸಂದರ್ಭದಲ್ಲೇ ಇಂತಹ ತೀರಾ ಕೀಳುಮಟ್ಟದ, ದುರುದ್ದೇಶ ಪ್ರೇರಿತ ನಿಂದನೆಗಿಳಿದಿರುವುದಕ್ಕೆ ನನ್ನ ಧಿಕ್ಕಾರವಿದೆ. ಸತ್ಯವನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
‘ಈ ರೀತಿಯ ಚಾರಿತ್ರ್ಯವಧೆ ಹಾಗೂ ಕಲ್ಪಿತ ಸಂಚಿನ ಹಿಂದೆ ಇರುವ ಸೂತ್ರಧಾರರಿಗೂ ಮತ್ತು ಅದನ್ನು ಕಾರ್ಯರೂಪಕ್ಕೆ ತಂದವರಿಗೂ ಆ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆ. ಈ ಅಧರ್ಮಕ್ಕೆ ತಾಯಿ ದುರ್ಗೆಯ ದಂಡನೆಯೇ ಅಂತಿಮ ಉತ್ತರ’ ಎಂದು ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.






