ದ್ವಿಭಾಷಾ ಸೂತ್ರವನ್ನು ಜಾರಿಗೆ ತರಬೇಕು: ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು, ಆ.9: ರಾಜ್ಯ ಶಿಕ್ಷಣ ನೀತಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಗೊಂದಲಗಳನ್ನು ಸೃಷ್ಟಿಸದೇ, ಆ ವರದಿಯನ್ನು ಸರಕಾರ ಮೂಲೆಗೆ ತಳ್ಳಿಹಾಕುವಂತೆ ಮಾಡದೆ, ಕಷ್ಟವಾದರೂ ಚರ್ಚೆಗಳನ್ನು ಮಾಡಿ ದ್ವಿಭಾಷಾ ನೀತಿ ಜಾರಿಗೆ ತರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಶನಿವಾರ ನಗರದ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಬನವಾಸಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ‘ತ್ರಿಭಾಷಾ ನೀತಿ ಸಾಕು-ಎರಡು ನುಡಿ ಕಲಿಕೆ ಬೇಕು’ ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿ ಇನ್ನೂ ನಮ್ಮ ಕೈಗೆ ಬಂದಿಲ್ಲ. ಅದನ್ನು ಓದುವದಕ್ಕೂ ಮೊದಲೇ ತೆಗೆದು ಮೂಲೆಗೆ ಹಾಕಬೇಕು ಎಂದು ಮಾತನಾಡಿದರೆ ಅದರ ನಷ್ಟ ನಮಗೆ ಎಂದರು.
ವರದಿ ಬೇಡ ಎಂದು ಮಾತನಾಡಿದರೆ ಸರಕಾರ ಸುಲಭವಾಗಿ ತೆಗೆದು ಬಿಡುತ್ತದೆ. ಆದರೆ ಇನ್ನೊಂದು ಶಿಕ್ಷಣ ನೀತಿ ಮಾಡಲು ಕನಿಷ್ಠ 25 ವರ್ಷಗಳು ಬೇಕಾಗುತ್ತದೆ. ಆದುದರಿಂದ ವರದಿಯನ್ನು ಅಧ್ಯಯನ ಮಾಡಿ, ಚರ್ಚಿಸಿ ಅರ್ಥ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಈಗ ನಮ್ಮ ಮುಂದೆ ಎರಡು ವರದಿಗಳಿವೆ. ಒಂದು ಎನ್‌ಇಪಿ ಮತ್ತೊಂದು ರಾಜ್ಯ ಶಿಕ್ಷಣ ನೀತಿ. ಶಾಲೆಗಳಿಗೆ ಹೋಗಿ ನೋಡಿದರೆ ಶಿಕ್ಷಕರು ತುಂಬಾ ಗೊಂದಲಕ್ಕೀಡಾಗಿದ್ದಾರೆ. ಈ ಗೊಂದಲ ನಿಧಾನವಾಗಿ ಹೋಗಬೇಕು ಮತ್ತು ಹೋಗುವಂತೆ ಮಾಡಬೇಕು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಹಂಪಾ ನಾಗರಾಜಯ್ಯ, ಬನವಾಸಿ ಬಳಗದ ಆನಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೇಂದ್ರ ಸರಕಾರ 1968 ರಿಂದ ಇಲ್ಲಿಯವರೆಗೂ ತ್ರಿಭಾಷಾ ಸೂತ್ರದ ವಿಶ್ಲೇಷಣೆಯನ್ನು ನೀಡಿಲ್ಲ. ಅದನ್ನು ಕೇಳುವುದು ನಮ್ಮ ಹಕ್ಕು. ತ್ರಿಭಾಷಾದಿಂದ ಯಾರಿಗೆ ಏನು ಲಾಭ ಆಗಿದೆ? ರಾಜ್ಯಕ್ಕೆ ಆದ ನಷ್ಟ, ಲಾಭಗಳ ಬಗ್ಗೆ ಪಟ್ಟಿಯನ್ನು ಕೊಡಬೇಕು. ಕನ್ನಡದವರು ತ್ರಿಭಾಷಾವನ್ನು ಅಳವಡಿಸಿಕೊಂಡು ಬಂದಿರುವುದರಿಂದ ಇದೀಗ, ರಾಜ್ಯಕ್ಕೆ ಮಾತೃ ಭಾಷೆಯೇ ಇಲ್ಲದ ಪರಿಸ್ಥಿತಿ ಬಂದಿದೆ. ಕರ್ನಾಟಕವನ್ನು ಸಶಕ್ತವಾದ, ಸಮಗ್ರವಾದ ಪ್ರಗತಿಪರ ರಾಜ್ಯವನ್ನು ಕಟ್ಟಬೇಕೆಂದರೆ ರಾಜ್ಯ ಭಾಷೆಯನ್ನು ಕಲಿಯಬೇಕು.
-ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ







