ಜಾತಿ ವ್ಯವಸ್ಥೆಯೇ ದೇಶದ ಸಮಸ್ಯೆಗಳಿಗೆ ಮೂಲ : ಮೂಡ್ನಾಕೂಡು ಚಿನ್ನಸ್ವಾಮಿ

ಡಾ.ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು : ಈ ದೇಶದ ಎಲ್ಲ ಅವಘಡಗಳಿಗೆ, ಅಪಮಾನಗಳಿಗೆ ಅಥವಾ ದೇಶ ಹಿಂದುಳಿವಿಕೆಗೆ ಮುಖ್ಯ ಕಾರಣ ಇಲ್ಲಿನ ಜಾತಿ ವ್ಯವಸ್ಥೆಯೇ ಆಗಿದೆ ಎಂದು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕುವೆಂಪು ಅನಿಕೇತನ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಡಾ.ವಡ್ಡಗೆರೆ ನಾಗರಾಜಯ್ಯಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಅಸಮಾಧಾನವಿದೆ. ದೇಶದ, ರಾಜ್ಯದ ಶಿಕ್ಷಣ ವ್ಯವಸ್ಥೆ ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾದ ವ್ಯಕ್ತಿತ್ವ ಬೆಳೆಸಿಕೊಳ್ಳುವುದಕ್ಕೆ ಕೊಡುವಂತ ಶಿಕ್ಷಣವಾಗಿಲ್ಲ. ಯಾರನ್ನೋ ಮೆಚ್ಚಿಸುವದಕ್ಕಾಗಿ ಪಠ್ಯ ಪುಸ್ತಕವನ್ನು ಮಾಡುತ್ತಾರೆಂದು ಅನಿಸುತ್ತಿದೆ ಎಂದರು.
ಇಂದಿನ ಪಠ್ಯಗಳು ದೇಶದ ಸಂಸ್ಕೃತಿಯ ಮೂಲವನ್ನು ಏನು ಹೇಳಬೇಕೋ, ಅದನ್ನು ಹೇಳುವುದಿಲ್ಲ. ಈ ಜಾತಿ ವ್ಯವಸ್ಥೆಯ ಬಗ್ಗೆ ಪಠ್ಯವೇ ಇಲ್ಲ. ಅದು ಯಾಕೆ? ಯಾರು? ಎನ್ನವುದೇ ಗೊತ್ತಾಗುವುದಿಲ್ಲ. ಇಂದಿಗೂ ಕೂಡ ಹೆಚ್ಚು ಅಂಕ ಪಡೆದವರಿಗೆ ಕೆಲಸ ಸಿಗುತ್ತಿಲ್ಲ, ಕಡಿಮೆ ಅಂಕ ತೆಗೆದಿರುವರಿಗೆ ಕೆಲಸ ಸಿಗುತ್ತಿದೆ ಎನ್ನುವುದನ್ನು ಈಗಿನ ಯುವಕರು ಮಾತನಾಡುತ್ತಿದ್ದಾರೆ. ಅದು ಹಾಗೆ ಆಗಬಾರದಿತ್ತು. ನಮ್ಮ ಶಿಕ್ಷಣ ವ್ಯವಸ್ಥೆ ಸರಿಯಾಗಿ ಇದ್ದಿದ್ದರೆ, ಈ ಮಾತು ಯಾರಿಂದಲೂ ಬರುತ್ತಿರಲಿಲ್ಲ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಮಕ್ಕಳು ಬಾಲ್ಯದಲ್ಲಿಯೇ ಅವರು ನಮ್ಮ ಮೂಲ ಏನು ಅನ್ನುವುದನ್ನು ತಿಳಿದುಕೊಳ್ಳಬೇಕು. ಜಾತಿ ಅನ್ನುವುದು ಅವಮಾನಕರವಾಗಿರುವುದು ಎಂದು ಬಿಟ್ಟರೆ, ಮೀಸಲಾತಿ ಯಾಕೆ ಎಂದು ಮಾತನಾಡುತ್ತಾರೆ. ಮೀಸಲಾತಿಯ ಬಗ್ಗೆ ಇಂದು ಅನೇಕರಿಗೆ ಸಾಕಷ್ಟು ಹೊಟ್ಟೆ ಕಿಚ್ಚಿದೆ. ಸಮುದಾಯದ ಅನೇಕರಿಗೆ ಮೀಸಲಾತಿ ಯಾಕೆ ಇದೆ ಎನ್ನವುದನ್ನೇ ತಿಳಿಸಿಲ್ಲ. ಅವರಿಗೆ ಎಂಟನೆ ತರಗತಿಯ ಪಠ್ಯದಲ್ಲಿ ಮೀಸಲಾತಿಯ ಕುರಿತು ಪರಿಚಯಿಸಬೇಕಿತ್ತು. ತಲೆತಲಾಂತರದಿಂದ ಅಕ್ಷರದಿಂದ ವಂಚಿತರಾಗಿರುವರಿಗೆ ಮೀಸಲಾತಿ ನೀಡಲಾಗಿದೆ ಎನ್ನುವ ಪಾಠ ಇಡಬೇಕಾಗಿತ್ತು ಎಂದರು.
ಯುಜಿಸಿ ಇತ್ತೀಚಿಗೆ ತಂದ ಕರುಡು ಎಷ್ಟರ ಮಟ್ಟಿಗೆ ಸರಿ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ಆದರೆ, ಕೇಂದ್ರ ಸರಕಾರ ಸಂಪೂರ್ಣ ತನ್ನ ವಶಕ್ಕೆ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದೆ. ದೇಶದ ಜನರನ್ನು, ಸಮಾಜವನ್ನು ರೂಪಿಸುವ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳು. ಅಂತಹ ವಿಶ್ವವಿದ್ಯಾನಿಲಯಗಳನ್ನು ಉಳಿಸಿಕೊಳ್ಳಲು ಎಲ್ಲ ಪ್ರಾಧ್ಯಾಪಕರು ಧ್ವನಿ ಎತ್ತಬೇಕು ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುವೆಂಪು ಅನಿಕೇತನ ಪುರಸ್ಕೃತ ಡಾ.ವಡ್ಡಗೆರೆ ನಾಗರಾಜಯ್ಯ, ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪಾ, ಪ್ರಾಧ್ಯಾಪಕರಾದ ನಿಂಗೇಗೌಡ ಎ.ಎಚ್., ನಾರಾಯಣಪ್ಪ ಎಂ. ನೀಲಕಂಠೇ ಗೌಡ, ಹುಲಿಕುಂಟೆ ಮೂರ್ತಿ, ಎ.ಎಸ್.ನಾಗರಾಜಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.







