ನವ್ಯಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ಶೂದ್ರ ಪರಿಕಲ್ಪನೆ ಆಸ್ಮಿತೆಯಾಗಿ ಉಳಿದಿದೆ: ಡಾ.ಕೆ.ಮರುಳಸಿದ್ದಪ್ಪ

ಬೆಂಗಳೂರು: ‘ವೈದಿಕ ಮೌಲ್ಯಗಳನ್ನು ಮುಂದುವರೆಸುವ ಭಾಗವಾಗಿ ನವ್ಯ ಸಾಹಿತ್ಯ ಬೆಳೆಯುತ್ತಿರುವ ಸಂದರ್ಭದಲ್ಲಿ ಅದಕ್ಕೆ ಪರ್ಯಾಯವಾಗಿ ಬೇರೆ ಬೇರೆ ಸಾಹಿತ್ಯ ಬರಬೇಕು ಎಂದಾಗ ಶೂದ್ರ ಪರಿಕಲ್ಪನೆಯು ಹುಟ್ಟಿಕೊಂಡಿತು. ಹಾಗಾಗಿ ಶೂದ್ರ ಎನ್ನುವುದು ಒಂದು ಅಸ್ಮಿತೆಯಾಗಿ ಉಳಿದುಕೊಂಡಿದೆ’ ಎಂದು ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ನೆಲದಮಾತು ವೇದಿಕೆಯಲ್ಲಿ ನೆಲದ ಮಾತು ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ‘ಶೂದ್ರ ಶ್ರೀನಿವಾಸ್ ಬದುಕು-ಬರಹ’ ಕೃತಿಯ ಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶೂದ್ರ ಎನ್ನುವುದು ಗುರುತು ಮತ್ತು ಆಸ್ಮಿತೆ ಆಗಿದೆ. ಸಾಹಿತ್ಯದ ನೆಲೆಯಲ್ಲಿ ಹುಟ್ಟಿಕೊಂಡ ಶೂದ್ರ ಪರಿಕಲ್ಪನೆಯು ಸಮಾಜ ಮತ್ತು ಸಾಂಸ್ಕೃತಿಕ ಲೋಕಕ್ಕೆ ಹರಡಿತು’ ಎಂದರು.
‘ಶೂದ್ರ ಪತ್ರಿಕೆಯು ಆರಂಭದಿಂದಲೂ ಸಾಹಿತ್ಯದೊಂದಿಗೆ ಬೆಳದುಕೊಂಡು ಹೋಯಿತು. ಈ ಪತ್ರಿಕೆಯ ಕಾಲಘಟ್ಟದಲ್ಲಿದ್ದ ಸಾಕ್ಷಿ ಮತ್ತು ಸಂಕ್ರಮಣ ಸಾಹಿತ್ಯದ ಹಿನ್ನೆಲೆಯಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಶೂದ್ರ ಪತ್ರಿಕೆಯು ಸಾಹಿತ್ಯದೊಂದಿಗೆ ಒಟ್ಟಾರೆ ಸಂಸ್ಕೃತಿಕವಾಗಿ ಪ್ರಕಟವಾಗಿರುವುದೇ ವಿಶಿಷ್ಟವೆನಿಸಿದೆ’ ಎಂದು ಅವರು ತಿಳಿಸಿದರು.
ಅಸ್ಮಿತೆ ಎನ್ನುವುದು ವಾಸ್ತವವಾಗಿದೆ. ಅದು ಸ್ನೇಹ ಮತ್ತು ಪ್ರೇಮವನ್ನು ತಂದು ಹಂಚಿದರೆ, ಯಾವತ್ತಿಗೂ ಸಮಾಜಕ್ಕೆ ಅಪಾಯವಾಗುವುದಿಲ್ಲ. ಆದರೆ ದ್ವೇಷವನ್ನು ಹರಡಬಾರದು. ಶೂದ್ರ ಪತ್ರಿಕೆಯು ಸ್ನೇಹ ಮತ್ತು ಪ್ರೀತಿಯನ್ನು ಅಸ್ಮಿತೆಯಾಗಿ ಇಟ್ಟುಕೊಂಡು ಬೆಳೆದಿದೆ ಎಂದ ಅವರು, ನಾವು ದ್ವೇಷ ಮಾಡುವಂತಹ ವಾತಾವರಣದಲ್ಲಿ ಬುದುಕುತ್ತಿದ್ದೇವೆ ಎಂದು ಮರುಳಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.
ನನ್ನ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶೂದ್ರ ಶ್ರೀನಿವಾಸ್ ಏಕೆ ನನ್ನ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ಅವರ ತರ್ಕವನ್ನು ಯಾರು ಪ್ರಶ್ನೆ ಮಾಡಲಾಗುವುದಿಲ್ಲ. ಹಾಗಾಗಿ ನನ್ನ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದರು.
ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ಮೈಸೂರಿನಲ್ಲಿ ನಡೆದ ಜಾತಿ ವಿನಾಸದ ಸಮಾವೇಶವನ್ನು ರಾಷ್ಟ್ರಕವಿ ಕುವೆಂಪು ಉದ್ಘಾಟನೆ ಮಾಡಿದರು. ಈ ಐತಿಹಾಸಿಕ ಘಟನೆಯಲ್ಲಿ ಶೂದ್ರ ಎಂಬ ಹೆಸರು ಶ್ರೀನಿವಾಸ್‍ಗೆ ಅಂಟಿಕೊಂಡಿತು. ಸಮಾವೇಶದಲ್ಲಿ ಕುವೆಂಪು ಅವರು ಶ್ರೀನಿವಾಸ್‍ಗೆ ಶೂದ್ರ ಎಂದು ಹೆಸರಿಟ್ಟರು. ಅಂದಿನಿಂದ ಅವರು ಶೂದ್ರ ಶ್ರೀನಿವಾಸ್ ಎಂದೇ ಹೆಸರಾದರು’ ಎಂದು ನೆನಪಿಸಿಕೊಂಡರು.
ಕನ್ನಡ ಸಾಹಿತ್ಯದ ನವ್ಯ ಕಾಲಘಟ್ಟದ ನಂತರ ಹುಟ್ಟಿದ ಎಲ್ಲ ಚಳುವಳಿಗಳಿಗೆ ಶೂದ್ರವೇ ವೇದಿಕೆಯಾಯಿತು. ಚಳುವಳಿಯ ತಾತ್ವಿಕ ನಿಲುವುಗಳನ್ನು ಅದು ಬೆಳೆಸಿತು ಎಂದು ಅವರು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ.ಕಿ.ರಂ.ನಾಗರಾಜ ನೆನಪಿನ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ ಅವರಿಗೆ, ಪ್ರೊ.ಜಿ.ಎಸ್.ಶಿವರುದ್ರಪ್ಪ ನೆನಪಿನ ಕಾವ್ಯ ಪ್ರಶಸ್ತಿಯನ್ನು ರೇಣುಕಾ ರಮಾನಂದ ಅಂಕೋಲ ಅವರಿಗೆ, ಡಾ.ಕೆ.ಮರುಳಸಿದ್ದಪ್ಪ ನೆನಪಿನ ರಂಗಭೂಮಿ ಪ್ರಶಸ್ತಿಯನ್ನು ನಾಟಕಕಾರ ಪ್ರಸನ್ನ ಅವರಿಗೆ, ಡಾ.ಸಿದ್ದಲಿಂಗಯ್ಯ ನೆನಪಿನ ವಿಚಾರ ಸಾಹಿತ್ಯ ಪ್ರಶಸ್ತಿಯನ್ನು ಪ್ರೊ.ಎಚ್.ಟಿ.ಪೋತೆ ಅವರಿಗೆ ಎಂ.ನಂಜಪ್ಪರೆಡ್ಡಿ ನೆನಪಿನ ಕೃಷಿ ಪ್ರಶಸ್ತಿಯನ್ನು ಕೃಷಿ ತಜ್ಞ ಜಿ.ಸುಶೀಲ್ ಅವರಿಗೆ ನೀಡಲಾಯಿತು. ಈ ವೇಳೆ ಲೇಖಕರಾದ ಎಚ್.ದಂಡಪ್ಪ, ಶೂದ್ರ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







