‘ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಬುಡಕಟ್ಟು ಸಮುದಾಯಗಳ ಒತ್ತಾಯ

ಬೆಂಗಳೂರು : ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ಕರ್ನಾಟಕದ 12 ಅರಣ್ಯ ಆಧಾರಿತ ಮೂಲ ಆದಿವಾಸಿಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಆದಿವಾಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಆದಿವಾಸಿ, ಬುಡ್ಡಕಟ್ಟು ಸಮುದಾಯಗಳ ಮುಖಂಡರು ಒತ್ತಾಯಿಸಿದ್ದಾರೆ.
ರವಿವಾರ ನಗರದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ‘ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರ’ದ ವತಿಯಿಂದ ಆಯೋಜಸಿದ್ದ ‘ಕರ್ನಾಟಕದ ನೈಜ ದುರ್ಬಲ ಹಾಗೂ ಅರಣ್ಯ ಅಧಾರಿತ ಮೂಲ ಆದಿವಾಸಿ ಬುಡಕಟ್ಟು ಸಮುದಾಯಗಳ ಕುರಿತ ಚಿಂತನ-ಮಂಥನ ಸಭೆ’ಯಲ್ಲಿ ಸೋಲಿಗ, ಯರವ, ಬೆಟ್ಟಕುರುಬ ಸೇರಿದಂತೆ ಇತರ ಆದಿವಾಸಿ ಸಮುದಾಯಗಳ ಮುಖಂಡರು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿರುವ ನೈಜ ದುರ್ಬಲ ಬುಡಕಟ್ಟುಗಳಾದ ಜೇನು ಕುರುಬ, ಕೊರಗ ಹಾಗೂ ಅರಣ್ಯ ಅಧಾರಿತ ಮೂಲ ಆದಿವಾಸಿ ಬುಡಕಟ್ಟುಗಳಾದ ಇರುಳಿಗ, ಸೋಲಿಗ, ಹಸಲರು, ಗೌಡ್ಲು, ಸಿದ್ದಿ, ಬೆಟ್ಟಕುರುಬ ಮಲೆಕುಡಿಯ, ಕುಡಿಯ, ಯರವ ಮತ್ತು ಪಣಿಯನ್ ಆದಿವಾಸಿಗಳನ್ನು ತಕ್ಷಣವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಪಟ್ಟಿಯಿಂದ ಕೈಬಿಡಬೇಕು ಹಾಗೂ ಆದಿವಾಸಿ ಎಂದು ಸರಕಾರ ಘೋಷಿಸಬೇಕು ಎಂದು ತಿಳಿಸಿದರು.
ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ನಿಗಮದಿಂದ 12 ಅರಣ್ಯಾಧಾರಿತ ಮೂಲದಿವಾಸಿಗಳನ್ನು ಕೈಬಿಟ್ಟು ಹಿಂದೆ ಇದ್ದ ಆದಿವಾಸಿ ಅಭಿವೃದ್ಧಿ ಮಂಡಳಿಯನ್ನು ಪುನರ್ ಸ್ಥಾಪಿಸಬೇಕು. ಪ್ರಸ್ತುತ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಒಂದು ಪ್ರತ್ಯೇಕ ಘಟಕವಾಗಿರುವ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರವನ್ನು ಕರ್ನಾಟಕ ಆದಿವಾಸಿಗಳ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯಾಗಿ ಘೋಷಣೆ ಮಾಡಿ ರಾಜ್ಯಮಟ್ಟದ ಸಂಸ್ಥೆಯಾಗಿ ಉನ್ನತೀಕರಣಗೊಳಿಸಬೇಕು. ಜೊತೆಗೆ ಪ್ರಸ್ತುತ ಬಜೆಟ್‍ನಲ್ಲಿ 5ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿರುವ ಆಶ್ರಮ ಶಾಲೆಗಳಲ್ಲಿ ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂರಕ್ಷಣೆ ಇಲ್ಲದೆ ನಿರಂತರವಾಗಿ ಹಲವು ಸಾವುಗಳು ಸಂಭವಿಸುತ್ತಿವೆ. ಈ ಬಗ್ಗೆ ಕೂಡಲೇ ಸರಕಾರ ಗಂಭೀರವಾಗಿ ಪರಿಗಣಿಸಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳ ಮೇಲೆ ಅಧ್ಯಯನ ಮಾಡಲು ಸಮಿತಿ ರಚನೆ ಮಾಡಬೆಕು ಎಂದು ಹೇಳಿದರು.
ಪ್ರಸ್ತುತ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ಸರಕಾರ ನೇಮಕ ಮಾಡಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದಲ್ಲಿಯೇ ಪರಿಶಿಷ್ಟ ಪಂಗಡದ ಒಳ ಮೀಸಲಾತಿಗಿರುವ ಸಾಧ್ಯತೆ ಸವಾಲುಗಳನ್ನು ಕುರಿತು ಅಧ್ಯಯನ ನಡೆಸಿ ವರದಿಯನ್ನು ತರಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಕೈಗೊಂಡರು.
ಸಭೆಯಲ್ಲಿ ರಾಷ್ಟ್ರೀಯ ಕಾನೂನು ಶಾಲೆ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರದ ಡಾ. ಚಂದ್ರಶೇಖರ್ ಆರ್.ವಿ, ಕೃಷ್ಣಮೂರ್ತಿ, ಸೋಲಿಗ ಸಮುದಾಯದ ಮುಖಂಡ ಮುತ್ತಯ್ಯ, ಶೈಲೇಂದ್ರ, ಸುಶೀಲಾ, ಬೆಟ್ಟಕುರುರಬ ಸಮುದಾಯದ ಮುಖಂಡ ವಿಠಲ್ ನಾಡಚ್ಚಿ ಸೇರಿದಂತೆ 12 ಅರಣ್ಯ ಆಧಾರಿತ ಮೂಲ ಆದಿವಾಸಿ ಬುಡಕಟ್ಟು ಸಮುದಾಯಗಳ ಮುಖಂಡರುಗಳು ಭಾಗವಹಿಸಿದ್ದರು.







