ಬಿ.ಎಲ್. ಸಂತೋಷ್ ವಿರುದ್ಧ ಆರೋಪ ಮಾಡಿದವನನ್ನು ಒದ್ದು ಒಳಗೆ ಹಾಕಲಾಗಿದೆ: ತಿಮರೋಡಿ ಬಂಧನ ಕುರಿತು ಡಿಕೆ ಶಿವಕುಮಾರ್ ಹೇಳಿಕೆ

ಡಿ.ಕೆ.ಶಿವಕುಮಾರ್
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಆರೋಪ ಮಾಡಿದವನನ್ನು ಒದ್ದು ಒಳಗೆ ಹಾಕಲಾಗಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಪ್ರಕರಣ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
"ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಆರೋಪ ಮಾಡಿದವನನ್ನು (ಮಹೇಶ್ ಶೆಟ್ಟಿ ತಿಮರೋಡಿ) ಒದ್ದು ಒಳಗೆ ಹಾಕಲಾಗಿದೆ. ಆರೋಪ ಮಾಡಲು ಆತನ ಬಳಿ ದಾಖಲೆ ಏನಿದೆ? ನಮ್ಮ ನಡುವೆ ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿರಬಹುದು ಆದರೆ ನಮ್ಮ ವಿರೋಧಿಗಳ ಬಗ್ಗೆ ಏನೇನೋ ಮಾತನಾಡುತ್ತಾನೆ ಎಂದು ನಾವು ಖುಷಿಪಡುವುದಲ್ಲ" ಎಂದು ತಿಳಿಸಿದರು.
"ಇಂದು ಅವರ ಬಗ್ಗೆ ಮಾತನಾಡಿದವರು, ನಾಳೆ ನಮ್ಮ ಬಗ್ಗೆಯೂ ಮಾತನಾಡುತ್ತಾರೆ. ಈ ಹಿಂದೆ ಮುಖ್ಯಮಂತ್ರಿಯವರು ಹಾಗೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಈ ರಾಜ್ಯದಲ್ಲಿ ಯಾರ ಸ್ವಾಭಿಮಾನಕ್ಕೂ ಧಕ್ಕೆ ಬರದಂತೆ ಕೆಲಸ ಮಾಡಬೇಕು. ರಾಜಕೀಯ ಮಾಡಲಿ, ರಾಜಕೀಯವಾಗಿ ಆರೋಪಗಳನ್ನು ಮಾಡಲಿ. ಆದರೆ ಆಧಾರಗಳನ್ನಿಟ್ಟುಕೊಂಡು ಆರೋಪ ಮಾಡಲಿ" ಎಂದರು.
ಧರ್ಮಸ್ಥಳದಲ್ಲಿ ಸಂಗ್ರಹವಾಗುವ ಹುಂಡಿ ಹಣದ ಲೆಕ್ಕ ಕೊಡಬೇಕು ಎನ್ನುವ ಸಮಾನ ಮನಸ್ಕ ವೇದಿಕೆಯ ಆಗ್ರಹದ ಬಗ್ಗೆ ಕೇಳಿದಾಗ, "ಇದನ್ನು ನೋಡಲು ಆದಾಯ ತೆರಿಗೆ ಇಲಾಖೆಯಿದೆ" ಎಂದರು.
ಬಿಜೆಪಿಯವರು ಧರ್ಮಸ್ಥಳ ಯಾತ್ರೆ ಮಾಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಬಿಜೆಪಿ ಒಂದು ಠುಸ್ ಗಿರಾಕಿ. ಅವರು ಮಾಡುತ್ತಿರುವುದು ರಾಜಕಾರಣ. ಹಿರಿಯ ಅಧಿಕಾರಿ ಮೊಹಾಂತಿ ಅವರ ನೇತೃತ್ವದಲ್ಲಿ ತನಿಖಾ ತಂಡವು ಅಚ್ಚುಕಟ್ಟಾಗಿ ತಮ್ಮ ಕೆಲಸ ನಿರ್ವಹಿಸುತ್ತಿದೆ" ಎಂದರು.







