ಬೆಂಗಳೂರು | ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಕಳ್ಳತನವೆಸಗಿದ ದಂಪತಿ; ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (credit: Grok)
ಬೆಂಗಳೂರು: ತಾವು ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ನೇಪಾಳ ಮೂಲದ ದಂಪತಿ ಕಳ್ಳತನವೆಸಗಿ ಪರಾರಿಯಾಗಿರುವ ಘಟನೆ ಇಲ್ಲಿನ ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿ ವರದಿಯಾಗಿದೆ.
ನಗರದ ಎಚ್ಎಎಲ್ ಠಾಣಾ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿರುವ ರಮೇಶ್ ಬಾಬು ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆ ಕೆಲಸ ಮಾಡುತ್ತಿದ್ದ ರಾಜ್ ಹಾಗೂ ದೀಪಾ ದಂಪತಿ ಮನೆಯಲ್ಲಿದ್ದ 2 ಕೆ.ಜಿ. ಚಿನ್ನಾಭರಣ, 10 ಲಕ್ಷ ರೂ. ನಗದು, ಪರವಾನಗಿ ಹೊಂದಿದ್ದ ಪಿಸ್ತೂಲ್ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ ಬಾಬು ಅವರ ಮನೆಯಲ್ಲಿ ಸೆಕ್ಯೂರಿಟಿ ಹಾಗೂ ಮನೆಗೆಲಸಕ್ಕೆಂದು 3 ತಿಂಗಳ ಹಿಂದಷ್ಟೇ ರಾಜ್ ಹಾಗೂ ದೀಪಾ ದಂಪತಿಯನ್ನು ನೇಮಿಸಿಕೊಳ್ಳಲಾಗಿತ್ತು. ಮೇ 27ರಂದು ರಮೇಶ್ ಬಾಬು ಅವರು ರಾಜ್ ದಂಪತಿಯನ್ನು ಮನೆಯಲ್ಲಿ ಬಿಟ್ಟು ಕುಟುಂಬ ಸಮೇತ ತಿರುಪತಿಗೆ ತೆರಳಿದ್ದರು.
ತಿರುಪತಿಯಲ್ಲಿದ್ದ ರಮೇಶ್ ಬಾಬು ಅವರು ಮೇ 28ರಂದು ಬೆಳಗಿನ ಜಾವ ತಮ್ಮ ಮೊಬೈಲ್ ಫೋನ್ ಮೂಲಕ ಪರಿಶೀಲಿಸಿದಾಗ ಮನೆಯ ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿರುವುದು ಕಂಡು ಬಂದಿತ್ತು.
ವಿದ್ಯುತ್ ವ್ಯತ್ಯಯ ಆಗಿರಬಹುದು ಎಂದುಕೊಂಡ ರಮೇಶ್ ಬಾಬು ಹೆಚ್ಚು ತಲೆಕಡಿಸಿಕೊಂಡಿರಲಿಲ್ಲ. ಆದರೆ, ಬೆಳಗ್ಗೆ ಪಕ್ಕದ ಮನೆಯವರು ಕರೆ ಮಾಡಿ, ನಿಮ್ಮ ಮನೆಯಲ್ಲಿ ಯಾರೂ ಇಲ್ಲ ಎಂದು ರಮೇಶ್ ಬಾಬು ಅವರಿಗೆ ತಿಳಿಸಿದ್ದರು. ತಕ್ಷಣ ಎಚ್ಚೆತ್ತ ರಮೇಶ್ ಬಾಬು, ತಮ್ಮ ಸ್ನೇಹಿತರ ಮೂಲಕ ಮನೆ ಬಳಿ ಪರಿಶೀಲಿಸಿದಾಗ ಮನೆಯ ಬಾಗಿಲುಗಳನ್ನು ಮುರಿದು ಕಳ್ಳತನ ಎಸಗಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ರಮೇಶ್ ಬಾಬು ಎಚ್ಎಎಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







