ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ: ಸಚಿವ ಯು.ಟಿ.ಖಾದರ್
ಮುಸ್ಲಿಮ್ ಅನಾಥಾಶ್ರಮದಿಂದ 1,657 ವಿದ್ಯಾರ್ಥಿಗಳಿಗೆ 1.40 ಕೋಟಿ ರೂ. ವಿದ್ಯಾರ್ಥಿವೇತನ ವಿತರಣೆ

ಬೆಂಗಳೂರು : ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡುವುದಕ್ಕಿಂತ ದೊಡ್ಡ ರಾಷ್ಟ್ರೀಯ ಸೇವೆ ಮತ್ತೊಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ಹೇಳಿದರು.
ಶನಿವಾರ ನಗರದ ಡಿಕನ್ಸನ್ ರಸ್ತೆಯಲ್ಲಿರುವ 134 ವರ್ಷಗಳ ಇತಿಹಾಸ ಹೊಂದಿರುವ ದಿ ಮುಸ್ಲಿಮ್ ಆರ್ಫನೇಜ್(ಅನಾಥಾಶ್ರಮ) ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಸ್ಲಿಮ್ ಅನಾಥಾಶ್ರಮವು ಅನಾಥ ಮಕ್ಕಳಿಗೆ ಉಚಿತ ಆಹಾರ, ವಸತಿ, ಬಟ್ಟೆ, ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಪ್ರಸ್ತುತ ಸುಮಾರು 500 ಮಕ್ಕಳ ಸಂಪೂರ್ಣ ಆರೈಕೆಯ ಜವಾಬ್ದಾರಿ ಹೊತ್ತಿರುವ ಸಂಸ್ಥೆ, ಅನಾಥಾಶ್ರಮದ ಹೊರಗೆ ವಿವಿಧ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅನಾಥ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ ಎಂದು ಖಾದರ್ ಬಣ್ಣಿಸಿದರು.
ಈ ವರ್ಷ 1,657ಕ್ಕೂ ಹೆಚ್ಚು ಅರ್ಹ ಅನಾಥ ವಿದ್ಯಾರ್ಥಿಗಳಿಗೆ ಒಟ್ಟು 1.40 ಕೋಟಿ ರೂ. ಮೌಲ್ಯದ ವಿದ್ಯಾರ್ಥಿವೇತನ ವಿತರಿಸುತ್ತಿರುವುದು ಶಿಕ್ಷಣದ ಉತ್ತೇಜನಕ್ಕಾಗಿ ಸಂಸ್ಥೆ ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಭಾರತವನ್ನು ಜಗತ್ತಿನ ಮುಂಚೂಣಿ ರಾಷ್ಟ್ರವಾಗಿ ಕಾಣುವುದು ನಮ್ಮ ಕನಸಾಗಿದೆ ಎಂದರು.
ಆದರೆ ಸಂಸತ್ ಸದಸ್ಯರು, ಶಾಸಕರು, ಅಧಿಕಾರಿಗಳು ಅಥವಾ ಉದ್ಯಮಿಗಳು ಬಲಿಷ್ಠರಾದ ಮಾತ್ರಕ್ಕೆ ದೇಶ ಬಲಿಷ್ಠವಾಗುವುದಿಲ್ಲ. ಮೈದಾನಗಳಲ್ಲಿ ಆಟವಾಡುವ ಮಕ್ಕಳು, ಶಾಲಾ-ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಹಾಗೂ ಅವಕಾಶ ವಂಚಿತ ಸಮುದಾಯಗಳ ಯುವಕರು ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೆಳೆಯಲು ಸಮಾನ ಅವಕಾಶಗಳು ದೊರೆತಾಗ ಮಾತ್ರ ದೇಶ ನೈಜ ಅರ್ಥದಲ್ಲಿ ಬಲಿಷ್ಠವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸರಕಾರಗಳ ಪ್ರಯತ್ನಗಳ ಜತೆಗೆ ಮುಸ್ಲಿಮ್ ಅನಾಥಾಶ್ರಮದಂತಹ ಸೇವಾ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ. ಬಡತನದಿಂದ ಹೊರಬರಲು ಶಿಕ್ಷಣವೇ ಅತ್ಯಂತ ಪ್ರಬಲ ಸಾಧನ. ಕೇವಲ ಕನಸು ಕಾಣುವುದಷ್ಟೇ ಸಾಲದು, ಅದನ್ನು ನನಸಾಗಿಸಲು ನಿರಂತರ ಪರಿಶ್ರಮ, ಛಲ ಮತ್ತು ದೃಢಸಂಕಲ್ಪ ಅಗತ್ಯ ಎಂದು ಅವರು ಕಿವಿಮಾತು ಹೇಳಿದರು.
ಉತ್ತಮ ಶಿಕ್ಷಣ ಪಡೆಯುವ ಬದ್ಧತೆ ಇದ್ದರೆ ಜೀವನದಲ್ಲಿ ಉನ್ನತ ಸ್ಥಾನ ತಲುಪಲು ಸಾಧ್ಯ. ವಿದ್ಯಾರ್ಥಿಗಳ ಸಾಧನೆ ಕುಟುಂಬಕ್ಕೆ ಹೆಮ್ಮೆ ತರುವುದರ ಜತೆಗೆ ದೇಶದ ಶಕ್ತಿಯೂ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಖಾದರ್ ಸಲಹೆ ನೀಡಿದರು.
ಹೊಸ ಕಾಲೇಜುಗಳ ಆರಂಭಕ್ಕೆ ಯೋಜನೆ :
ಸಂಸ್ಥೆಯ ಕಾರ್ಯದರ್ಶಿ ನವೀದ್ ಅಹ್ಮದ್ ಖಾನ್ ಮಾತನಾಡಿ, ಪ್ರತಿವರ್ಷ ಅನಾಥ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದರ ಜತೆಗೆ ಸಂಸ್ಥೆಯ ಶೈಕ್ಷಣಿಕ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ನರ್ಸಿಂಗ್, ಫಾರ್ಮಸಿ, ಬಿಎಎಂಎಸ್ ಹಾಗೂ ಅಲೈಡ್ ಸೈನ್ಸಸ್ ಕಾಲೇಜುಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ತರಬೇತಿ ಕೇಂದ್ರ ಆರಂಭಿಸುವ ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಯು.ಟಿ.ಖಾದರ್, ಪ್ರಸ್ತಾವಿತ ಕಾಲೇಜುಗಳ ಪಠ್ಯಕ್ರಮದಲ್ಲಿ ಫಿಸಿಯೋಥೆರಪಿ ಕೋರ್ಸ್‍ನ್ನೂ ಸೇರಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬೀದರ್ ನ ವಿಸ್ಡಮ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಅಧ್ಯಕ್ಷ ಮುಹಮ್ಮದ್ ಆಸಿಫುದ್ದೀನ್, ಫಾಲ್ಕನ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸುಭಾನ್ ಮಾತನಾಡಿದರು. ದಿ ಮುಸ್ಲಿಂ ಆರ್ಫನೇಜ್ ಅಧ್ಯಕ್ಷ ಫಝಲ್ ಅಹ್ಮದ್ ಎಂ., ಉಪಾಧ್ಯಕ್ಷ ಜಾವೇದ್ ಅಹ್ಮದ್ ಖಾನ್ (ಜಾವೇದ್ ಪಟೇಲ್), ಖಜಾಂಚಿ ಮುಹಮ್ಮದ್ ಇಬ್ರಾಹೀಂ ಶಫೀಕ್, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.






