ʻನಮ್ಮ ಮೆಟ್ರೋʻದಲ್ಲಿ ಟಿಕೆಟ್ ರಹಿತ ಪ್ರಯಾಣ: ವಿದೇಶಿ ಯೂಟ್ಯೂಬರ್ ವಿರುದ್ಧ BMRCL ಕ್ರಮ

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಗೇಟ್ ಜಿಗಿದು ಟಿಕೆಟ್‌ರಹಿತ ಪ್ರಯಾಣ ಮಾಡಿರುವ ವೀಡಿಯೊ ಹಂಚಿಕೊಂಡ ಖ್ಯಾತ ಯೂಟ್ಯೂಬರ್ ಫಿಡಿಯಾಸ್ ಪನಾಯೊಟೌ ಅವರ ವಿರುದ್ಧ ʼಬೆಂಗಳೂರು ಮೆಟ್ರೋ ರೈಲು ನಿಗಮʼ (ಬಿಎಂಆರ್‌ಸಿಎಲ್) ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿದೆ.
'ಭಾರತದ ಮೆಟ್ರೋದೊಳಗೆ ನುಗ್ಗುವುದು ಹೇಗೆ' ಎಂಬ ಶೀರ್ಷಿಕೆಯ ವಿಡಿಯೋವನ್ನು ಫಿಡಿಯಾಸ್ ತಮ್ಮ ಟ್ವಿಟರ್ ಹಾಗೂ ಇನ್ಸಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇದು ವೈರಲ್ ಆದ ಬಳಿಕ ತೀವ್ರ ಟೀಕೆಗೆ ಗುರಿಯಾಗಿದೆ.
ʼʼಟಿಕೆಟ್‌ರಹಿತ ಪ್ರಯಾಣ ಮಾಡಿ ಬೇರೆಯವರಿಗೂ ಪ್ರಚೋದನೆ ಮಾಡಿದ್ದಾನೆ. ಭಾರತದಲ್ಲಿ ಏನೂ ಮಾಡಿದರೂ ನಡೆಯುತ್ತೆ ಎನ್ನುವ ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುʼʼ ಎಂದು ಹಲವರು ಬಿಎಂ ಆರ್‌ಸಿಎಲ್ ಮತ್ತು ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿದ್ದಾರೆ.
ಖ್ಯಾತ ಉದ್ಯಮಿ, ಬಿಲಿಯನೇರ್ ಎಲಾನ್ ಮಸ್ಕ್ ಅವರನ್ನು ಅಪ್ಪಿಕೊಳ್ಳುವ ಮೂಲಕ ಪ್ರಸಿದ್ಧಿಗೆ ಬಂದಿದ್ದ ಫಿಡಿಯಸ್, ತಮ್ಮನ್ನು 'ವೃತ್ತಿಪರ ತಪ್ಪು ಎಸಗುವವ' ಎಂದು ಕರೆದುಕೊಂಡಿದ್ದಾರೆ. ಅವರು ಯೂಟ್ಯೂಬ್ ಚಾನೆಲ್‌ಗೆ 2.26 ಮಿಲಿಯನ್ ಚಂದಾದಾರರು ಇದ್ದಾರೆ.
ʼʼಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚನೆʼʼ
"ಟಿಕೆಟ್ ಇಲ್ಲದೆ ವ್ಯಕ್ತಿಯೊಬ್ಬರು ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಿ, ಮೆಟ್ರೋದಲ್ಲಿ ಪ್ರಯಾಣಿಸಿದ ವಿಡಿಯೋವನ್ನು ನಾನು ನೋಡಿದ್ದೇನೆ. ಇಂತಹ ವರ್ತನೆ ಒಪ್ಪತಕ್ಕದ್ದಲ್ಲ. ಆ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದ್ದೇನೆ" ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಝ್ ತಿಳಿಸಿದ್ದಾರೆ.







