ತಾ.ಪಂ, ಜಿ.ಪಂ ಕ್ಷೇತ್ರಗಳ ಮೀಸಲಾತಿ ಅಧಿಸೂಚನೆ ಪ್ರಕಟ: ಜನವರಿಯಲ್ಲಿ ಚುನಾವಣೆ: ಸಚಿವ ಈಶ್ವರ ಖಂಡ್ರೆ
''30 ಜಿಲ್ಲೆಗಳ 1,101 ಜಿ.ಪಂ ಕ್ಷೇತ್ರಗಳಿಗೆ, 234 ತಾ.ಪಂಗಳ 3,580 ಸದಸ್ಯ ಸ್ಥಾನಗಳಿಗೆ ಮೀಸಲು ನಿಗದಿ''

ಸಚಿವ ಈಶ್ವರ ಖಂಡ್ರೆ (File photo)
ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರಕಾರ ಪ್ರಕಟಿಸಿದ್ದು, ಜನವರಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ 30 ಜಿಲ್ಲೆಗಳ 1,101 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಹಾಗೂ 234 ತಾಲೂಕು ಪಂಚಾಯತ್ ಗಳ 3,580 ಸದಸ್ಯ ಸ್ಥಾನಗಳ ಮೀಸಲಾತಿ ನಿಗದಿ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
2022ರಲ್ಲೇ ತಾಪಂ ಮತ್ತು ಜಿ.ಪಂ.ಗಳ ಅವಧಿ ಪೂರ್ಣವಾಗಿತ್ತು. ಹಿಂದಿನ ಸರಕಾರ ಚುನಾವಣೆ ನಡೆಸಿರಲಿಲ್ಲ. ಈ ಮಧ್ಯೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕೆಲವು ಪಂಚಾಯತ್ ಗಳನ್ನು ಮೇಲ್ದರ್ಜೆಗೇರಿಸಲಾಯಿತು ಹಾಗೂ ಕೆಲವು ಗ್ರಾಮ ಪಂಚಾಯತ್ ಕ್ಷೇತ್ರಗಳು ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದವು. ಇದರಿಂದಾಗಿ ಕ್ಷೇತ್ರ ಪುನರ್ ವಿಂಗಡಣೆ ಅನಿವಾರ್ಯವಾಯಿತು. ಇದು ಚುನಾವಣೆ ವಿಳಂಬಕ್ಕೆ ಕಾರಣವಾಯಿತು ಎಂದು ಸಚಿವರು ತಿಳಿಸಿದರು.
ರಾಜ್ಯ ಸರಕಾರ ತನ್ನ ಕರ್ತವ್ಯ ಪೂರ್ಣಗೊಳಿಸಿದೆ. ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಿಸಿ ಚುನಾವಣೆ ನಡೆಸಲಿದೆ. ಬಹುತೇಕ ಜನವರಿಯಲ್ಲಿ ಚುನಾವಣೆಗಳು ನಡೆಯಲಿವೆ ಎಂದರು.




