ದೇವನಹಳ್ಳಿ | ಭೀಕರ ರಸ್ತೆ ಅಪಘಾತ: ಕಾಶಿ ಯಾತ್ರೆ ಹೊರಟಿದ್ದ ತುಮಕೂರಿನ ಮೂವರು ಮಹಿಳೆಯರು ಮೃತ್ಯು

ಬೆಂಗಳೂರು : ಟಿ.ಟಿ. ವಾಹನ ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಶಿ ತೀರ್ಥಯಾತ್ರೆಗೆ ಹೊರಟಿದ್ದ ತುಮಕೂರು ಜಿಲ್ಲೆಯ ತಿಪಟೂರಿನ ಮೂವರು ಮಹಿಳೆಯರು ಮೃತಪಟ್ಟ ಘಟನೆ ದೇವನಹಳ್ಳಿ ಬಳಿ ರವಿವಾರ ಬೆಳಗಿನ ಜಾವ ಸಂಭವಿಸಿದ
ತಿಪಟೂರಿನ ವಿದ್ಯಾನಗರ ಜಯಮ್ಮ (65), ಯಶೋಧಮ್ಮ (60) ಮತ್ತು ಗಂಗಾ (40) ಮೃತಪಟ್ಟವರು ಎಂದು ತಿಳಿದುಬಂದಿದೆ.
ಟಿ.ಟಿ ವಾಹನದಲ್ಲಿದ್ದ ಇತರ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಶಿಗೆ ತೆರಳುವುದಕ್ಕಾಗಿ ಬಹುತೇಕ ಮಹಿಳೆಯರನ್ನೇ ಒಳಗೊಂಡಿದ್ದ 15 ಮಂದಿಯ ತಂಡ ಶನಿವಾರ ರಾತ್ರಿ 10ಕ್ಕೆ ತಿಪಟೂರಿನಿಂದ ಟಿ.ಟಿ. ವಾಹನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಇಂದು ಬೆಳಗ್ಗಿನ ಜಾವ ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಸಮೀಪ ಎಸ್ಟಿಆರ್ಆರ್ ರಸ್ತೆಯಲ್ಲಿ ಟಿ.ಟಿ. ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವನಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




