ಮೇ 15ರಿಂದ ಸರಕಾರಿ ನೌಕರರ ವರ್ಗಾವಣೆ; ಮಾರ್ಗಸೂಚಿ ಪ್ರಕಟ

ಬೆಂಗಳೂರು : ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಮೇ 15ರಿಂದ ಜೂನ್ 14ರ ವರೆಗೆ ನಡೆಯಲಿದ್ದು, ಈ ಸಂಬಂಧ ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ, ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಮಾಡಲಾಗುವ ವರ್ಗಾವಣೆಗಳ ಸಂಖ್ಯೆಯು ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.6ರಷ್ಟನ್ನು ಮೀರಬಾರದು. ಗ್ರೂಪ್-ಎ, ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ಸರಕಾರಿ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳಲ್ಲಿ 2 ವರ್ಷ, ‘ಸಿ’ ವೃಂದದ ಹುದ್ದೆಯಲ್ಲಿ 4 ವರ್ಷ ಹಾಗೂ ‘ಡಿ’ ವೃಂದದ ಹುದ್ದೆಗಳಲ್ಲಿ 7 ವರ್ಷ ಸೇವಾವಧಿಯನ್ನು ಪೂರ್ಣಗೊಳಿಸಿದವರನ್ನು ವರ್ಗಾವಣೆ ಮಾಡಬಹುದಾಗಿದೆ. ‘ಎ’ ಮತ್ತು ‘ಬಿ’ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದ ವರ್ಗಾವಣೆ ಪ್ರಸ್ತಾವನೆಗಳನ್ನು ಸಚಿವಾಲಯದ ಆಡಳಿತ ಇಲಾಖೆಗಳ ಮೂಲಕವೇ ಆಯಾ ಇಲಾಖಾ ಸಚಿವರಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಕಚೇರಿಗಳಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆದುರಾಗಿ ನೇಮಕಗೊಂಡ ನೌಕರರನ್ನು ಅವರ ನೇಮಕಾತಿ ದಿನಾಂಕದಿಂದ ಕನಿಷ್ಠ 10 ವರ್ಷಗಳ ವರೆಗೆ ಹೈ.ಕ. ಪ್ರದೇಶ ಹೊರತು ಪಡಿಸಿ ಬೇರೆಡೆ ವರ್ಗಾವಣೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಇದೇ ವೇಳೆ ಪತಿ-ಪತ್ನಿ, ವಿಶೇಷ ಚೇತನ, ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ಸರಕಾರಿ ನೌಕರರು ಮತ್ತು ಅಧಿಕಾರಿಗಳ ಸಾರ್ವತ್ರಿಕ ವರ್ಗಾವಣೆಗೆ ಸಾಮಾನ್ಯ ನೌಕರರಿಗೆ ನಿಗದಿಪಡಿಸಿರುವ ಷರತ್ತುಗಳನ್ನು ಸಡಿಲಗೊಳಿಸಲಾಗಿದೆ. ಅಲ್ಲದೆ, ಗಂಭೀರ ಸ್ವರೂಪದ ಆರೋಪಗಳಿದ್ದಲಿ, ವಿಚಾರಣೆ/ ಕ್ರಿಮಿನಲ್ ನಡಾವಳಿ ಪ್ರಾರಂಭಿಸಿದ್ದಲ್ಲಿ ಅಂತಹ ಅಧಿಕಾರಿ-ನೌಕರರ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಕೋರಬಾರದು ಎಂದು ತಿಳಿಸಲಾಗಿದೆ.







