‘ತುಂಗಭದ್ರಾ ಜಲಾಶಯ’ | ಕಾಲುವೆಗಳಿಗೆ ನ.30ರ ವರೆಗೆ ನೀರು ಹರಿಸಲು ಸಿಎಂಗೆ ಮನವಿ

ಬೆಂಗಳೂರು ತುಂಗಭದ್ರಾ ಜಲಾಶಯ ಅವಲಂಬಿತ ಕಾಲುವೆಗಳ ಭಾಗದ ರೈತರು ಬೆಳೆದ ಬೆಳೆಗಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನ.30ರ ವರೆಗೆ ಸಮರ್ಪಕ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆ ಭಾಗದ ಸಚಿವರು, ಸಂಸದರು, ಶಾಸಕರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ಗೆ ಮನವಿ ಸಲ್ಲಿಸಿದೆ.
ಬುಧವಾರ ಸಚಿವರಾದ ಶಿವರಾಜ್ ತಂಗಡಗಿ, ಝಮೀರ್ ಅಹ್ಮದ್, ಶಾಸಕರಾದ ಬಿ.ನಾಗೇಂದ್ರ, ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಬಿ.ಎಂ.ನಾಗರಾಜ್, ಬಸನಗೌಡ ತುರ್ವಿಹಾಳ್, ಬಸವನಗೌಡ ಬಾದರ್ಲಿ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ್‍ಗೌಡ ಸೇರಿದಂತೆ ಇನ್ನಿತರರು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಆ ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ನಾಗೇಂದ್ರ, ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ.20ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಆದರೆ, ಮಳೆ ಅಭಾವದಿಂದ ಕಟಾವು ಹಂತದಲ್ಲಿರುವ ರೈತರು ಬೆಳೆದ ಬೆಳೆಗಳಿಗೆ ಇನ್ನು ಹೆಚ್ಚುವರಿಯಾಗಿ ಹತ್ತು ದಿನಗಳ ಕಾಲ ನೀರು ಪೂರೈಕೆ ಮಾಡಿದರೆ ಭತ್ತ, ಜೋಳ, ಮೆಣಸಿನಕಾಯಿ ಬೆಳೆಗಳು ಸಂಪೂರ್ಣವಾಗಿ ಬೆಳೆ ಬಂದು ರೈತರಿಗೆ ಆರ್ಥಿಕವಾಗಿ ಪ್ರಗತಿ ಯಾಗುತ್ತದೆ ಎಂದರು.




