ಬೆಂಗಳೂರು| ʼಡಿಜಿಟಲ್ ಅರೆಸ್ಟ್ʼ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ: ಇಬ್ಬರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು, ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಎಂಬವರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.
ಇಂಜಿನಿಯರ್ ಆಗಿದ್ದ ಮಂಜುನಾಥ್ 31 ವರ್ಷಗಳ ಕಾಲ ನೈಜೀರಿಯಾದಲ್ಲಿ ಕೆಲಸ ನಿರ್ವಹಿಸಿ, ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬ್ಯಾಂಕ್ನ ಪ್ರತಿನಿಧಿಗಳ ಸೋಗಿನಲ್ಲಿ ಮಾರ್ಚ್ ತಿಂಗಳಿನಲ್ಲಿ ಮಂಜುನಾಥ್ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ‘ಕ್ರೆಡಿಟ್ ಕಾರ್ಡ್ ಲಿಮಿಟ್ಸ್ ಓವರ್ ಡ್ಯೂ ಆಗಿದೆ’ ಎಂದು ವಿವರಗಳನ್ನು ಪಡೆದುಕೊಂಡಿದ್ದರು.
ಬಳಿಕ ನಿಮ್ಮ ಖಾತೆಯ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ, ಆದ್ದರಿಂದ ಈ.ಡಿ., ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದಿದ್ದರು. ನಂತರ ನಕಲಿ ವಾರೆಂಟ್ನ ಫೋಟೋ ಕಳಿಸಿ ‘ನಿಮ್ಮನ್ನು ಬಂಧಿಸುತ್ತಿದ್ದು, ತಿಹಾರ್ ಜೈಲಿನಲ್ಲಿರಿಸಲಿದ್ದೇವೆ’ ಎಂದು ಬೆದರಿಸಿದ್ದರು. ಸುಮಾರು ಮೂರು ತಿಂಗಳ ಕಾಲ ಬೆದರಿಸುತ್ತ ವಿವಿಧ ಹಂತಗಳಲ್ಲಿ 4.79 ಕೋಟಿ ರೂಪಾಯಿ ಸುಲಿಗೆಗೈದಿದ್ದ ಆರೋಪಿಗಳು, ಆಸ್ತಿ ಪತ್ರಗಳ ಕಾಪಿಗಳನ್ನೂ ಪಡೆದುಕೊಂಡಿದ್ದರು. ವಂಚಕರ ಕಿರುಕುಳ ಅತಿಯಾದಾಗ ಅದನ್ನು ತಾಳಲಾರದ ದಂಪತಿ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವೃದ್ಧ ದಂಪತಿಯ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದ ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ವಂಚಿಸಿದ ಹಣವನ್ನು ಆರೋಪಿಗಳು ಶ್ರೀಲಂಕಾದಲ್ಲಿ ಕ್ಯಾಸಿನೋ ಆಡಲು ಬಳಸಿರುವುದು ಸಹ ಗೊತ್ತಾಗಿದೆ. ಸದ್ಯ ಆರೋಪಿತರ ವಿಚಾರಣೆ ನಡೆಸಲಾಗುತ್ತಿದ್ದು, ವಂಚಿಸಿದ ಹಣವನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದಾರೆ.