ಕರಡು ಯುಜಿಸಿ ನಿಯಮಾವಳಿಗಳಿಗೆ ಶಿಕ್ಷಣ ತಜ್ಞರ ವಿರೋಧ
ಶಿಕ್ಷಣ ಕ್ಷೇತ್ರವನ್ನು ಕೇಂದ್ರದ ಕಪಿಮುಷ್ಟಿಗೆ ತಗೆದುಕೊಳ್ಳುವ ಹುನ್ನಾರ : ಪ್ರೊ.ರಾಜಾಸಾಬ್

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ತನ್ನ ಕಪಿಮುಷ್ಟಿಗೆ ತಗೆದುಕೊಳ್ಳುವ ಹುನ್ನಾರವನ್ನು ಕೇಂದ್ರ ಸರಕಾರ ಪ್ರಸಕ್ತ ಯುಜಿಸಿಯ ನಿಯಮಾವಳಿಗಳ ಮೂಲಕ ಮಾಡುತ್ತಿದೆ ಎಂದು ತುಮಕುರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಎ.ಎಚ್.ರಾಜಾಸಾಬ್ ಖಂಡಿಸಿದ್ದಾರೆ.
ಶನಿವಾರ ಇಲ್ಲಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿರುವ ಮಾಜಿ ಉಪಕುಲಪತಿಗಳ ವೇದಿಕೆಯ ಸಂಭಾಗಣದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ(ಎಐಎಸ್ಇಸಿ) ಆಯೋಜಿಸಿದ್ದ ಶಿಕ್ಷಣ ತಜ್ಞರ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು(ಯುಜಿಸಿ) ಇತ್ತೀಚೆಗೆ ಪ್ರಕಟಿಸಿರುವ ನಿಯಮಾವಳಿಗಳು ದುರ್ಬಲ ವರ್ಗ, ಮಹಿಳೆ, ಗ್ರಾಮೀಣ, ಹಿಂದುಳಿದ ವರ್ಗಗಳ, ಅಂಗವಿಕಲರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಈ ಕರಡು ನಿಯಮಾವಳಿಗಳು ಜಾರಿಯಾದಲ್ಲಿ, ಪ್ರಭಾವಿ ಕುಟುಂಬಗಳೇ ರಾಜ್ಯದ ಒಂದೊಂದು ವಿವಿಯ ಆಡಳಿತ ಮಂಡಳಿಯಾಗುವ ಸಾಧ್ಯತೆ ಇರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರದ ಬಗ್ಗೆ ಗೊತ್ತಿರದ ಕೈಗಾರಿಕೋದ್ಯಮಿಗಳ ಕೈಗೆ ಶಿಕ್ಷಣ ಸೇರುತ್ತದೆ. ಯುಜಿಸಿ ನಿಯಮಾವಳಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಂವಿಧಾನಿಕ ಮೌಲ್ಯಗಳು ಇಲ್ಲ. ಎನ್ಇಪಿಯನ್ನು ಒಪ್ಪದ ಕರ್ನಾಟಕ, ಪಶ್ಚಿಮ ಬಂಗಾಲ, ತಮಿಳುನಾಡಿನಂತಹ ರಾಜ್ಯಗಳ ಮೇಲೆ ಒತ್ತಡ ಹೇರುವ ಹುನ್ನಾರವೂ ಆಗಿದೆ. ಹೊಸ ನೀತಿಗಳಿಂದಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ಎರಡು ಲಭ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು, ಉಪನ್ಯಾಸಕರು, ಮತ್ತಿತರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರ ಅಭಿಪ್ರಾಯ ಪಡೆದು ಹೊಸ ನೀತಿ-ನಿಯಮಗಳನ್ನು ಮಾಡಬೇಕು. ಆದರೆ ಈ ಯಾವ ಪ್ರಜಾತಾಂತ್ರಿಕ ಪ್ರಕ್ರೀಯೆಯನ್ನು ಯುಜಿಸಿ ಪಾಲಿಸದೆ ಕರಡು ರೂಪಿಸಿದೆ ಎಂದು ಅವರು ಖಂಡಿಸಿದರು.
ಎಐಎಸ್ಇಸಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಯುಜಿಸಿಯು ಉಪನ್ಯಾಸಕರ ನೇಮಕಾತಿಯ ಬಗ್ಗೆ ಮಾತನಾಡುತ್ತಿಲ್ಲ. ಆರ್ಥಿಕ ಧನ ಸಹಾಯದ ಕೊರತೆಯಿಂದ ಅತಿಥಿ ಉಪನ್ಯಾಸಕರು ಸಂಬಳ ಪಡೆಯಲಾಗುತ್ತಿಲ್ಲ. ಇದರ ಬಗ್ಗೆಯೂ ಮಾತನಾಡುತ್ತಿಲ್ಲ, ಬದಲಾಗಿ ರಾಜ್ಯಗಳ ಮೇಲೆ ತನ್ನ ಅಭಿಪ್ರಾಯವನ್ನು ಹೇರುವ ಪ್ರಯತ್ನವನ್ನು ಮಾಡುತ್ತಿದೆ ಎಂದರು.
ಎಐಎಸ್ಇಸಿಯ ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ ಮಾತನಾಡಿ, ಯುಜಿಸಿಯ ಕರಡು ನಿಯಮಾವಳಿಗಳು ವಿಶ್ವವಿದ್ಯಾಲಯಗಳ ಸ್ಥಾಪಿಸುವ ಮೂಲ ಕಲ್ಪನೆ ಮತ್ತು ಉದ್ದೇಶಗಳಿಗೆ ವಿರುದ್ದವಾಗಿದೆ. ಇದರಿಂದಾಗಿ ವಿಶ್ವ ವಿದ್ಯಾನಿಲಯಗಳ ಸ್ವಾಯತ್ತತೆ ಸಂಪೂರ್ಣ ನಾಶವಾಗುತ್ತದೆ. ಇದು ಶೈಕ್ಷಣಿಕ ಮತ್ತು ಆಡಳಿತದ ಅಧಿಕಾರಶಾಹಿ ಕೇಂದ್ರಿಕರಣಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಧ್ಯಾಪಕಿ ಡಾ. ಎಂ.ಎಸ್. ಆಶಾದೇವಿ ಮಾತನಾಡಿ, ಯುಜಿಸಿಯ ಈ ಕರಡು ಉನ್ನತ ಶಿಕ್ಷಣದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಂತೆ ಭಾಸವಾಗುತ್ತಿದೆ. ಈ ಪ್ರಸ್ತಾವಗಳಲ್ಲಿ ಕನ್ನಡದಂತಹ ಭಾಷೆಗಳ ಏಳ್ಗೆಯ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಾಂತೀಯ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವುದಿಲ್ಲ ಎಂದರು.
ಸೇಂಟ್ ಜೋಸೆಫ್ ವಿವಿಯ ಉಪಕುಲಪತಿ ಡಾ. ವಿಕ್ಟರ್ ಲೋಬೋ ಮಾತನಾಡಿ, ಯುಜಿಸಿಯು ಸಂವಿಧಾನಕ್ಕಿಂತಲೂ, ಶಾಸನಸಭೆಗಳಿಗಿಂತಲೂ ಶ್ರೇಷ್ಠ ಎಂದು ಭಾವಿಸದಂತಿದೆ. ಯುಜಿಸಿ ರೂಪಿಸುತ್ತಿರುವ ನೂತನ ನಿಯಮಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಸಮವರ್ತಿ ಪಟ್ಟಿಯಲ್ಲಿ ಬರುವ ಶಿಕ್ಷಣವನ್ನು ಸಂಪೂರ್ಣವಾಗಿ ಕೇಂದ್ರ ಸರಕಾರ ಕಿತ್ತುಕೊಳ್ಳುತ್ತಿದೆ ಎಂದು ಖಂಡಿಸಿದರು.
ವಿಜ್ಞಾನಿ ಆರ್.ಎಲ್. ಮೌರ್ಯನ್ ಮಾತನಾಡಿ, ಯುಜಿಸಿಯ ನೀತಿಗಳ ಹಿಂದೆ ಶಿಕ್ಷಣದ ಏಳಿಗೆಗಿಂತಲೂ ರಾಜಕೀಯ ದುರುದ್ದೇಶದಿಂದ ಪ್ರೇರಿತವಾಗಿದೆ. ಕೇಂದ್ರ ಸರಕಾರ ತನ್ನ ಹಸ್ತಕ್ಷೇಪ ಕೈ ಬಿಟ್ಟು ಪ್ರಜಾತಾಂತ್ರಿಕವಾಗಿ ವರ್ತಿಸಬೇಕೆ, ಹೊರತು ತನ್ನ ರಾಜಕೀಯ ಸಿದ್ದಾಂತವನ್ನು ಶಿಕ್ಷಣದಲ್ಲಿ ತೂರಬಾರದು ಎಂದರು.
ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್ ಮಾತನಾಡಿ, ಉನ್ನತ ಶಿಕ್ಷಣದ ಬಹುತೇಕ ಜವಾಬ್ದಾರಿಗಳನ್ನು ರಾಜ್ಯ ಸರಕಾರವೇ ಹೊರುತ್ತಿರುವುದರಿಂದ ರಾಜ್ಯ ಸರಕಾರದ ಪಾತ್ರವನ್ನು ಗೌಣಗೊಳಿಸುವ ಕ್ರಮವನ್ನು ಕೈ ಬಿಡಬೇಕು. ಯುಜಿಸಿಯ ನಿಯಮಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆಗೂ ವಿರುದ್ದವಾದುದಾಗಿದೆ ಎಂದರು.
ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪಾ ಮಾತನಾಡಿ, ಈ ಯುಜಿಸಿಯ ಕರಡು ಪೂರ್ವಾನ್ವಯವಾಗುತ್ತಿದ್ದು, ಇದು ಶಿಕ್ಷಣ ಕ್ಷೇತ್ರಕ್ಮೆ ತುಂಬಾ ಅಪಾಯಕಾರಿಯಾಗಿದೆ. ನಮ್ಮ ಸಮಾಜ ಜಾಗೃತವಾಗಿ ಇಂಥ ನೀತಿಗಳ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ಕರ್ನಾಟಕ ಮಾಜಿ ಉಪಕುಲಪತಿಗಳ ವೇದಿಕೆಯ ಅಧ್ಯಕ್ಷ ಡಾ.ಎಸ್. ಚಂದ್ರಶೇಖರ ಶೆಟ್ಟಿ, ನಿವೃತ್ತ ಶಿಕ್ಷಕ ಕೆ.ವಿ.ಭಟ್ ಹಾಗು ಪ್ರೊ.ನಾಗರಾಜರೆಡ್ಡಿ, ರಾಜೇಶ ಭಟ್, ಗೋಪಾಲ ಕೃಷ್ಣನ್, ಸುನಿತಾ ಎಸ್, ಸೋಮಶೇಖರ ಗೌಡ, ನಾಗರತ್ನ, ತಿಪ್ಪೆಸ್ವಾಮಿ, ಐಶ್ವರ್ಯ ಸಿ.ಎಮ್. ಮುಂತಾದವರು ಭಾಗವಹಿಸಿದ್ದರು.
ಶೈಕ್ಷಣಿಕ ನೀತಿಗಳನ್ನು ಶಿಕ್ಷಣ ತಜ್ಞರು ರೂಪಿಸಬೇಕೆ, ಹೊರತು ಸರಕಾರಗಳಲ್ಲ. ಶಿಕ್ಷಣವನ್ನು ರಾಜ್ಯ ಸರಕಾರವಾಗಲೀ ಕೇಂದ್ರ ಸರಕಾರವಾಗಲಿ ನಿಯಂತ್ರಿಸಬಾರದು. ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಯಲ್ಲೂ ಸರಕಾರ ಒಮ್ಮತದಲ್ಲಿ ಆಯ್ಕೆ ಮಾಡಬೇಕು.
-ವಿ.ಎನ್.ರಾಜಶೇಖರ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷ
ಸಭೆಯಲ್ಲಿನ ನಿರ್ಣಯಗಳು :
1. ಪ್ರಸ್ತುತ ಯುಜಿಸಿ ನಿಯಮಗಳು 2025 ಅನ್ನು ತಕ್ಷಣವೇ ಹಿಂಪಡೆಯಬೇಕು.
2. ವಿಶ್ವವಿದ್ಯಾನಿಲಯಗಳ ಆಡಳಿತಾತ್ಮಕ ವಿಷಯಗಳಿಂದ ಯುಜಿಸಿಯನ್ನು ಕೈ ಬಿಟ್ಟು, ವಿಶ್ವವಿದ್ಯಾಲಯಗಳಿಗೆ ಶೈಕ್ಷಣಿಕ ಸ್ವಾಯತ್ತತೆಯನ್ನು ಮರುಸ್ಥಾಪಿಸಬೇಕು.
3. ಉಪಕುಲಪತಿಯ ನೇಮಕಾತಿಗೆ ಸಂಬಂಧಿಸಿ ಪ್ರಖ್ಯಾತ ಶಿಕ್ಷಣ ತಜ್ಞರನ್ನು ಒಳಗೊಂಡ ಶೋಧನಾ ಸಮಿತಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ನಿಂದ ರಚಿಸಲ್ಪಡಬೇಕು.
4. ವಿಶ್ವವಿದ್ಯಾನಿಲಯಗಳ ಆಂತರಿಕ ವಿಷಯಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರಗಳು ಹಸ್ತಕ್ಷೇಪ ಮಾಡಬಾರದು.
5. ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಎಲ್ಲಾ ಗುತ್ತಿಗೆ ನೇಮಕಾತಿಗಳ ಸೇವೆಗಳನ್ನು ತಕ್ಷಣವೇ ಕ್ರಮಬದ್ಧಗೊಳಿಸಬೇಕು.







