ಕಲಾವಿದರು ಪ್ರಶಸ್ತಿ ಪಡೆಯುವುದು ಸುಲಭವಲ್ಲ: ಉಮಾಶ್ರೀ
ಕರ್ನಾಟಕ ನಾಟಕ ಅಕಾಡಮಿ: ವಾರ್ಷಿಕ ಪ್ರಶಸ್ತಿ, ದತ್ತಿ ಪುರಸ್ಕಾರ ಪ್ರದಾನ

ಬೆಂಗಳೂರು : ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಹಾಗೂ ಗೌರವಗಳು ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡುತ್ತವೆ. ಆದರೆ ಕಲಾವಿದರು ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಪ್ರಶಸ್ತಿ ಪಡೆಯುವುದು ಸುಲಭವಲ್ಲ ಎಂದು ಪರಿಷತ್ ಉಪಸಭಾಪತಿ ಉಮಾಶ್ರೀ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡಮಿ ಆಯೋಜಿಸಿದ್ದ 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಇದೇ ವೇಳೆ ಮುಖ್ಯಮಂತ್ರಿ ಚಂದ್ರು ಅವರಿಗೆ ನಾಟಕ ಅಕಾಡಮಿಯ ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಕೆ.ವಿ ನಾಗರಾಜಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಎನ್.ಮಂಜುಶ್ರೀ, ನಿರ್ದೇಶಕಿ ಕೆ.ಎಂ.ವಸುಂಧರಾ, ಅಕಾಡಮಿ ರಿಜಿಸ್ಟ್ರಾರ್ ಬಿ.ನೀಲಮ್ಮ ಮತ್ತಿತರರು ಹಾಜರಿದ್ದರು.
ತರಾತುರಿಯಲ್ಲಿ ಪ್ರಶಸ್ತಿ ಪ್ರದಾನ
ವಿಧಾನ ಮಂಡಲದ ಅಧಿವೇಶನ ಇರುವ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಉಮಾಶ್ರೀ ಅವರು ಅಧಿವೇಶನಕ್ಕೆ ತೆರಳಬೇಕಾಗಿರುವುದರಿಂದ ತರಾತುರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಚಂದ್ರು ಹಾಗೂ ವಾರ್ಷಿಕ ಪ್ರಶಸ್ತಿ ಪಡೆದ ಮೊದಲ ತಂಡದ ಹತ್ತು ಕಲಾವಿದರ ಪೈಕಿ ಆರು ಮಂದಿಯ ಪರಿಚಯವನ್ನಷ್ಟೇ ಮಾಡಲಾಯಿತು.






