ರಾಜಕೀಯ ಅಸ್ತಿತ್ವಕ್ಕೆ ಒಗ್ಗಟ್ಟು ಅಗತ್ಯ : ಮಧು ಬಂಗಾರಪ್ಪ

ಬೆಂಗಳೂರು : ಬಿಲ್ಲವ, ಈಡಿಗ ಸಮುದಾಯದ 26 ಉಪಪಂಗಡಗಳು ಹರಿದು ಹಂಚಿಹೋಗದೇ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸಮಾಜದ ಅಭಿವೃದ್ಧಿ ಮತ್ತು ರಾಜಕೀಯ ಅಸ್ತಿತ್ವವನ್ನು ಬಲಪಡಿಸುವ ದೃಷ್ಟಿಯಿಂದ ಸಂಘಟಿತ ಪ್ರಯತ್ನ ಅತ್ಯಂತ ಅಗತ್ಯವಾಗಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ನಾರಾಯಣ ಗುರು ಮಹಾಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಡಿಗ, ಬಿಲ್ಲವ ಸಮಾಜದಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಾವೆಲ್ಲರೂ ಒಂದಾಗಿ ಸಂಘಟಿತರಾದಾಗ ಮಾತ್ರ ಸಮಾಜಕ್ಕೆ ನಿಜವಾದ ಶಕ್ತಿ ಬರಲು ಸಾಧ್ಯ ಎಂದು ಹೇಳಿದರು.
ನಾವು ಸಮಾಜಕ್ಕಾಗಿ ಎಷ್ಟೇ ಉತ್ತಮ ಕೆಲಸಗಳನ್ನು ಮಾಡಿದರೂ ಕೆಲವೊಮ್ಮೆ ಅವುಗಳನ್ನು ಸಮುದಾಯ ಮರೆತುಬಿಡುತ್ತದೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದೆ. ಪಠ್ಯಪುಸ್ತಕಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳನ್ನು ಸೇರ್ಪಡೆಗೊಳಿಸುವುದು, ನಾರಾಯಣ ಗುರುಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸುವುದು ಹಾಗೂ ನಿಗಮ-ಮಂಡಳಿ ರಚಿಸುವುದು ಈ ಮೂರು ಬೇಡಿಕೆಗಳಾಗಿದ್ದವು. ಅಂದಿನ ಮುಖ್ಯಮಂತ್ರಿಗಳು ಕೂಡಲೇ ಸಮ್ಮತಿಸಿ ಅವುಗಳಿಗೆ ಅನುಮೋದನೆ ನೀಡಿದ್ದರು ಎಂದು ಹೇಳಿದರು.






