‘ವಿಕಲಚೇತನರ ಸಬಲೀಕರಣ’ ಕರ್ನಾಟಕದ ಮಾದರಿಗೆ ವಿಶ್ವಸಂಸ್ಥೆಯ ಹೆಬಾ ಹಗ್ರಾಸ್ ಮೆಚ್ಚುಗೆ

ಬೆಂಗಳೂರು : ವಿಕಲಚೇತನರ ಹಕ್ಕುಗಳ ರಕ್ಷಣೆ ಮತ್ತು ಅವರ ಸಮಗ್ರ ಸಬಲೀಕರಣಕ್ಕಾಗಿ ಕರ್ನಾಟಕ ಸರಕಾರ ಅನುಷ್ಠಾನಗೊಳಿಸುತ್ತಿರುವ ವಿನೂತನ ಯೋಜನೆಗಳು ಈಗ ಅಂತರ್
ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ರಾಜ್ಯ ಸರಕಾರದ ಕಾರ್ಯವೈಖರಿ ಮತ್ತು ಇಲಾಖೆಗಳ ನಡುವಿನ ಸಮನ್ವಯವನ್ನು ವಿಶ್ವಸಂಸ್ಥೆಯ ವಿಕಲಚೇತನರ ಹಕ್ಕುಗಳ ವಿಶೇಷ ವರದಿಗಾರರಾದ ಹೆಬಾ ಹಗ್ರಾಸ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಮನ್ವಯದಲ್ಲಿ ಭಾರತ ಪ್ರವಾಸ ಕೈಗೊಂಡಿರುವ ಹೆಬಾ ಹಗ್ರಾಸ್ ಅವರು, ನ.20 ಮತ್ತು 21ರಂದು ಬೆಂಗಳೂರಿಗೆ ಭೇಟಿ ನೀಡಿದರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ನೇತೃತ್ವದ ಉನ್ನತ ಅಧಿಕಾರಿಗಳ ತಂಡವು ರಾಜ್ಯದ ಸಾಧನೆಗಳ ವಿಸ್ತೃತ ವರದಿಯನ್ನು ಅವರ ಮುಂದಿಟ್ಟಿತು.
ಉದ್ಯೋಗ ಮತ್ತು ವಸತಿಯಲ್ಲಿ ಭರ್ಜರಿ ಮೀಸಲಾತಿ:
ಸರಕಾರಿ ಉದ್ಯೋಗಗಳಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಶೇ.4 ಹಾಗೂ ಸಿ ಮತ್ತು ಡಿ ಹುದ್ದೆಗಳಿಗೆ ಶೇ.5ರಷ್ಟು ಮೀಸಲಾತಿ ನೀಡಲಾಗಿದ್ದು, ಸದ್ಯ 11,120 ವಿಕಲಚೇತನರು ಸರಕಾರಿ ಸೇವೆಯಲ್ಲಿದ್ದಾರೆ. ಅಷ್ಟೇ ಅಲ್ಲದೆ, ಬಿಡಿಎ ಮತ್ತು ಸರಕಾರಿ ನಿವೇಶನ ಹಂಚಿಕೆಯಲ್ಲಿ ಶೇ.5ರಷ್ಟು ಮೀಸಲಾತಿಯೊಂದಿಗೆ ದರದಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ದತ್ತು ಸ್ವೀಕಾರದಲ್ಲಿ ರಾಷ್ಟ್ರಮಟ್ಟದ ದಾಖಲೆ :
ವಿಶೇಷ ಅಗತ್ಯವುಳ್ಳ 172 ಮಕ್ಕಳನ್ನು ದತ್ತು ನೀಡುವ ಮೂಲಕ ಕರ್ನಾಟಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದರಲ್ಲಿ 137 ಮಕ್ಕಳು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ದತ್ತು ಸ್ವೀಕಾರವಾಗಿರುವುದು ವಿಶೇಷ.
ತಂತ್ರಜ್ಞಾನ ಸ್ನೇಹಿ ಗ್ರಾಮೀಣ ಗ್ರಂಥಾಲಯ :
ರಾಜ್ಯದ 5,888 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲ್ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ದೃಷ್ಟಿಹೀನರಿಗಾಗಿ 350 ಕೇಂದ್ರಗಳಲ್ಲಿ ‘ಅಲೆಕ್ಸಾ' ಧ್ವನಿ ಸಹಾಯಕ ವ್ಯವಸ್ಥೆ ಹಾಗೂ 800 ಕೇಂದ್ರಗಳಲ್ಲಿ ಬೀಕನ್ ವ್ಯವಸ್ಥೆ ಅಳವಡಿಸಲಾಗಿದೆ.
ಸಾಮಾಜಿಕ ಭದ್ರತೆ ಮತ್ತು ಆರೈಕೆ :
9.77 ಲಕ್ಷಕ್ಕೂ ಹೆಚ್ಚು ಮಂದಿಗೆ ಯುಡಿಐಡಿ ಕಾರ್ಡ್ ವಿತರಿಸಲಾಗಿದೆ. 5 ಲಕ್ಷಕ್ಕೂ ಹೆಚ್ಚು ವಿಕಲಚೇತನರಿಗೆ ಮಾಸಿಕ 1,400 ರೂ., ತೀವ್ರ ಬೌದ್ಧಿಕ ವಿಕಲಚೇತನರಿಗೆ 2 ಸಾವಿರ ರೂ. ಪಿಂಚಣಿ, 10,835 ಆರೈಕೆದಾರರಿಗೆ ಮಾಸಿಕ ಭತ್ತೆ ಹಾಗೂ 1,620 ಅಂಧ ತಾಯಂದಿರಿಗೆ ಶಿಶುಪಾಲನಾ ಭತ್ತೆ ನೀಡಲಾಗುತ್ತಿದೆ. 11 ಲಕ್ಷಕ್ಕೂ ಹೆಚ್ಚು ಮಂದಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗಿದೆ.
ಆರೋಗ್ಯ ಮತ್ತು ಪುನರ್ವಸತಿ :
18 ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರಗಳ ಮೂಲಕ 20,601 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, 18 ಪುನರ್ವಸತಿ ಕೇಂದ್ರಗಳಿಂದ 2.77 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದಿದ್ದಾರೆ. ‘ಟೆಲಿ-ಮಾನಸ್' ಸಹಾಯವಾಣಿ (14416) ಮೂಲಕ 1.2 ಲಕ್ಷ ಕರೆಗಳಿಗೆ ಸ್ಪಂದಿಸಲಾಗಿದೆ. ಜೊತೆಗೆ ನಿಮ್ಹಾನ್ಸ್ ಮತ್ತು ಮೈಸೂರಿನ ಎಐಐಎಸ್‍ಎಚ್ ಸಂಸ್ಥೆಗಳ ಸೇವೆಗಳನ್ನೂ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.
ಶಿಕ್ಷಣ ಮತ್ತು ವಿಪತ್ತು ನಿರ್ವಹಣೆ :
ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಪ್ರವಾಹ ಮತ್ತು ಭೂಕುಸಿತ ಪೀಡಿತ ಗ್ರಾಮಗಳಲ್ಲಿ ವಿಕಲಚೇತನರ ಮ್ಯಾಪಿಂಗ್ ಮಾಡಿ, ಆಶ್ರಯ ಕೇಂದ್ರಗಳಲ್ಲಿ ಮುಂಚಿತವಾಗಿ ರಾಂಪ್ ಹಾಗೂ ವಿಶೇಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
‘ಆರು ಅಂಶಗಳ ಕ್ರಿಯಾ ಯೋಜನೆ' :
ಸಭೆಯಲ್ಲಿ ಕೇವಲ ಸಾಧನೆಗಳನ್ನು ಮಾತ್ರವಲ್ಲದೆ, ಅನುಷ್ಠಾನದಲ್ಲಿರುವ ಸವಾಲುಗಳನ್ನೂ ಅಧಿಕಾರಿಗಳು ತೆರೆದಿಟ್ಟರು. ಬಾಕಿ ಇರುವ 13 ಜಿಲ್ಲೆಗಳಲ್ಲಿ ಆರಂಭಿಕ ಹಸ್ತಕ್ಷೇಪ ಕೇಂದ್ರಗಳು ಮತ್ತು ಪುನರ್ವಸತಿ ಕೇಂದ್ರಗಳನ್ನು ಶೀಘ್ರ ಪ್ರಾರಂಭಿಸುವುದು, ವಿಶೇಷ ಶಾಲೆಗಳನ್ನು ಉಪಗ್ರಹ ಸಂಪನ್ಮೂಲ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ ‘ಆರು ಅಂಶಗಳ ಕ್ರಿಯಾ ಯೋಜನೆ'ಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ರಾಜ್ಯದ ಪ್ರಗತಿಯ ಕುರಿತು ವಿವರಿಸಿದರು.
ಇವರೊಂದಿಗೆ ಕಂದಾಯ, ಉನ್ನತ ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ವಿಕಲಚೇತನರ ಆರೋಗ್ಯ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದು, ತಮ್ಮ ಸಂಸ್ಥೆಗಳ ಮೂಲಕ ನೀಡಲಾಗುತ್ತಿರುವ ವಿಶೇಷ ಸೇವೆಗಳು ಮತ್ತು ಸಂಶೋಧನೆಗಳ ಕುರಿತು ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.






