‘ಉಮ್ಮೀದ್ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿಗಳ ದಾಖಲೆ ಅಪ್ಲೋಡ್’ : ಜಮಾಅತೆ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಸಹಾಯ ಕೇಂದ್ರ ಉದ್ಘಾಟನೆ

ಬೆಂಗಳೂರು : ವಕ್ಫ್ ಆಸ್ತಿಗಳ ದಾಖಲೆಗಳನ್ನು ಕೇಂದ್ರ ಸರಕಾರದ ‘ಉಮ್ಮೀದ್’ ಪೋರ್ಟಲ್‌ನಲ್ಲಿ ಪ್ರಸಕ್ತ ಸಾಲಿನ ಡಿ.5ರೊಳಗಾಗಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಆದುದರಿಂದ, ಎಲ್ಲ ವಕ್ಫ್ ಸಂಸ್ಥೆಗಳು ತಮ್ಮ ಆಸ್ತಿಗಳ ದಾಖಲೆಗಳನ್ನು ಉಮ್ಮೀದ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವಂತೆ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಾಜುದ್ದೀನ್ ಖಾನ್ ಮನವಿ ಮಾಡಿದ್ದಾರೆ.
ಗುರುವಾರ ಆರ್.ಟಿ.ನಗರದಲ್ಲಿರುವ ಜಮಾಅತೆ ಇಸ್ಲಾಮಿ ಹಿಂದ್ ಕೇಂದ್ರ ಕಚೇರಿಯಲ್ಲಿ ಉಮ್ಮೀದ್ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿಗಳ ನೋಂದಣಿಗೆ ಸಂಬಂಧಿಸಿದಂತೆ ಸ್ಥಾಪಿಸಿರುವ ಸಹಾಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಕ್ಫ್ ಸಂಸ್ಥೆಗಳಿಗೆ ನೆರವು ನೀಡಲು ಜಮಾಅತೆ ಇಸ್ಲಾಮಿ ಹಿಂದ್ ಸಹಾಯ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ. ವಕ್ಫ್ ಸಂಸ್ಥೆಗಳು ಈ ಸಹಾಯ ಕೇಂದ್ರದ ನೆರವು ಪಡೆದುಕೊಳ್ಳಬೇಕು. ಸೆ.22ರಂದು ವಕ್ಫ್ ಮಂಡಳಿಯ ವತಿಯಿಂದ ಸುತ್ತೋಲೆ ಹೊರಡಿಸಿ, ಒಂದು ತಿಂಗಳೊಳಗೆ ಆಸ್ತಿಗಳ ದಾಖಲೆಗಳನ್ನು ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವಂತೆ ಎಲ್ಲ ವಕ್ಫ್ ಸಂಸ್ಥೆಗಳ ಟ್ರಸ್ಟಿಗಳು, ಮೇಲ್ವಿಚಾರಕರು, ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು ಎಂದು ಅವರು ಹೇಳಿದರು.
ಆದರೆ, ಈವರೆಗೆ ರಾಜ್ಯಾದ್ಯಂತ ಕೇವಲ ಶೇ.5 ರಿಂದ 10ರಷ್ಟು ಆಸ್ತಿಗಳ ದಾಖಲೆಗಳು ಮಾತ್ರ ಅಪ್ಲೋಡ್ ಆಗಿದೆ. ರಾಜ್ಯದಲ್ಲಿ ಒಟ್ಟು 33 ಸಾವಿರ ವಕ್ಫ್ ಸಂಸ್ಥೆಗಳ 48 ಸಾವಿರ ಆಸ್ತಿಗಳಿವೆ. ಈ ಎಲ್ಲ ಆಸ್ತಿಗಳ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದರೆ, ಯಾರೊಬ್ಬರೂ ದಾಖಲೆಗಳನ್ನು ತಿರುಚಲು ಸಾಧ್ಯವಾಗುವುದಿಲ್ಲ. ಅವುಗಳು ಸುರಕ್ಷಿತವಾಗಿರುತ್ತವೆ ಎಂದು ಮಾಜುದ್ದೀನ್ ಖಾನ್ ತಿಳಿಸಿದರು.
ಜನಸಾಮಾನ್ಯರಲ್ಲಿ ಉಮ್ಮೀದ್ ಪೋರ್ಟಲ್ ಕುರಿತು ಕೆಲವು ತಪ್ಪು ತಿಳುವಳಿಕೆಗಳಿಂದಾಗಿ, ದಾಖಲೆಗಳನ್ನು ಅಪ್ಲೋಡ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ವಕ್ಫ್ ಸಂಸ್ಥೆಗಳು ತಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ವಕ್ಫ್ ಮಂಡಳಿಯು ಆ ದಾಖಲೆಗಳನ್ನು ಪರಿಶೀಲಿಸುತ್ತದೆ. ಮೊದಲ ಹಂತದಲ್ಲಿ ದಾಖಲೆಗಳ ಪರಿಶೀಲನೆ, ಎರಡನೇ ಹಂತದಲ್ಲಿ ಅವುಗಳನ್ನು ಅನುಮೋದಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ಮಾತನಾಡಿ, ಕೇಂದ್ರ ಸರಕಾರದ ನೂತನ ವಕ್ಫ್ ತಿದ್ದುಪಡಿ ಕಾಯ್ದೆಯಿಂದಾಗಿ ಮುಸ್ಲಿಮರು ತಮ್ಮ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ, ವಕ್ಫ್ ಆಸ್ತಿಗಳು ಅಪಾಯಕ್ಕೆ ಸಿಲುಕಿವೆ ಎಂದು ಹೇಳಿದರು. ವಕ್ಫ್ ತಿದ್ದುಪಡಿ ಕಾಯ್ದೆಯ ವಿಷಯವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ವಕ್ಫ್ ಆಸ್ತಿಗಳ ದಾಖಲೆಗಳನ್ನು ಉಮ್ಮೀದ್ ಪೋರ್ಟಲ್‌ನಲ್ಲಿ ತಕ್ಷಣವೆ ಅಪ್ಲೋಡ್ ಮಾಡಿ ಆಸ್ತಿಯನ್ನು ಸುರಕ್ಷಿತಗೊಳಿಸುವಂತೆ ವಕ್ಫ್ ಸಂಸ್ಥೆಗಳ ಅಧಿಕಾರಿಗಳಿಗೆ ವಿನಂತಿ ಮಾಡಿದ ಅವರು, ನಮ್ಮ ಕಚೇರಿಯಲ್ಲಿ ಸಹಾಯ ಕೇಂದ್ರವನ್ನು ಪ್ರಾರಂಭಿಸಿ, ಇಬ್ಬರು ವ್ಯಕ್ತಿಗಳನ್ನು ಈ ಕೆಲಸಕ್ಕಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಮ್ ಮುತ್ತಹಿದ ಮಹಝ್‌ನ ಸಂಚಾಲಕ ಮಸೂದ್ ಅಬ್ದುಲ್ ಖಾದರ್, ವಕ್ಫ್ ಕೌನ್ಸಿಲ್ ಅಧಿಕಾರಿ ಅತ್ತಾವರ‌್ರಹ್ಮಾನ್, ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಯೂಸುಫ್ ಕನ್ನಿ, ಮೌಲಾನಾ ವಹೀದುದ್ದೀನ್ ಖಾನ್ ಉಮರಿ, ಲಬೀದ್ ಶಾಫಿ, ಮುಹಮ್ಮದ್ ಪೀರ್, ಇನ್ನಿತರು ಉಪಸ್ಥಿತರಿದ್ದರು.
ಆಯಾ ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಗಳ ದಾಖಲೆಗಳನ್ನು ಅಪ್ಲೋಡ್ ಮಾಡಲು ವಕ್ಫ್ ಅಧಿಕಾರಿಗಳಿಗೆ ನೆರವು ನೀಡುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲದೇ, ವಕ್ಫ್ ಸಂಸ್ಥೆಗಳ ಅನುಕೂಲಕ್ಕಾಗಿ ಜಿಲ್ಲ ವಕ್ಫ್ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
-ಡಾ.ಮಾಜುದ್ದೀನ್ ಖಾನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರಾಜ್ಯ ವಕ್ಫ್ ಮಂಡಳಿ







