ಉತ್ತರ ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಯು.ಟಿ.ಖಾದರ್

ಬೆಂಗಳೂರು : ಸದನದಲ್ಲಿ ಉತ್ತರಿಸುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸರಕಾರಕ್ಕೆ ಸೂಚನೆ ನೀಡಿದರು.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಸಂದರ್ಭದಲ್ಲಿ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳಲ್ಲಿ ಅರ್ಧಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಸಿಗದ ಬಗ್ಗೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಅವರು ಆಕ್ಷೇಪ ಎತ್ತಿದ್ದನ್ನು ಸಮರ್ಥಿಸಿ ಯು.ಟಿ.ಖಾದರ್ ಮಾತನಾಡಿದರು.
ನಿನ್ನೆ ಸಹ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳಿಗೆ ಉತ್ತರಗಳ ಸಂಖ್ಯೆ ಕಡಿಮೆ ಇತ್ತು. ಇಂದು ಸಹ ಅದೇ ಆಗಿದೆ. ಈ ರೀತಿ ಆಗುವುದು ಸರಿಯಲ್ಲ. ಸಚಿವರುಗಳು ತಮ್ಮ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕು. ಸದನದಲ್ಲಿ ಶಾಸಕರು ಕೇಳುವ ಎಲ್ಲ ಪ್ರಶ್ನೆಗಳಿಗೆ ತಡ ಮಾಡದೆ ಉತ್ತರಗಳು ಸದನಕ್ಕೆ ಬರಬೇಕು. ಉತ್ತರಗಳು ಸಿದ್ದಪಡಿಸಿ ಕೊಡುವುದಕ್ಕೆ ಐಎಎಸ್-ಐಪಿಎಸ್ ಆಗಬೇಕಾ, ಸದನಕ್ಕೆ ಉತ್ತರ ಕೊಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಸಭಾಧ್ಯಕ್ಷರ ಮಾತಿಗೆ ಸ್ಪಂದಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸದನದಲ್ಲಿ ಶಾಸಕರು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲೇಬೇಕು. ಉತ್ತರವನ್ನು ವಿಳಂಬ ಮಾಡದೇ ನೀಡುವಂತೆ ಎಲ್ಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಸದನಕ್ಕೆ ಉತ್ತರ ಕೊಡಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.





