ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟು ಬಿಸಿ ಮುಟ್ಟಿಸಿದ ಸಚಿವ ಯು.ಟಿ.ಖಾದರ್

ಬೆಂಗಳೂರು : ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೆ ರಾತ್ರೋ ರಾತ್ರಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್, ವೈದ್ಯಕೀಯ ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.
ಇಲ್ಲಿನ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ತಡರಾತ್ರಿ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಗರಂ ಆದರು.ಇದಕ್ಕೂ ಮೊದಲು ಗರ್ಭಿಣಿಯೊಬ್ಬರು ನೆಲದಲ್ಲಿ ಕುಳಿತಿರುವುದನ್ನು ಕಂಡ ಸಚಿವ ಖಾದರ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಆನಂತರ ಶುಕ್ರವಾರ ಮೊದಲ ಬಾರಿಗೆ ಆರೋಗ್ಯ ಸೌಧಕ್ಕೆ ಭೇಟಿ ನೀಡಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಾಜ್ಯದ ಆರೋಗ್ಯ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕುರಿತು ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾಡಿದ ಉತ್ತಮ ಕೆಲಸಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅದೇ ರೀತಿ, ಆಯುಷ್ಮಾ ನ್ ಕರ್ನಾಟಕ ಯೋಜನೆಯ ಅನುಷ್ಠಾನದ ಬಗ್ಗೆ ವಿಮರ್ಶಾ ಸಭೆ ನಡೆಸಿದ್ದು, ಈ ಯೋಜನೆಯಡಿ ಯಾವುದೇ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚುವರಿ ಶುಲ್ಕ ವಸೂಲು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯೋಜನೆಯಲ್ಲಿ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆಯುವ ಅವಕಾಶವಿಲ್ಲ. ಒಂದು ವೇಳೆ ಆಸ್ಪತ್ರೆಗಳು ಹೆಚ್ಚುವರಿ ಹಣ ಪಡೆದರೆ, ಅದರ ಮಾಹಿತಿಯನ್ನು ಜಿಲ್ಲಾ ಮಟ್ಟದ ಆರೋಗ್ಯ ಮಿತ್ರರ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನೀಡುವಂತೆ ಸಾರ್ವಜನಿಕರಿಗೆ ಅವರು ಮನವಿ ಮಾಡಿದರು.
ವೈದ್ಯರ ನೇಮಕಾತಿ: ‘ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಎಂಬಿಬಿಎಸ್ ಪದವೀಧರರು ನೇರವಾಗಿ ವಾಕ್-ಇನ್ ಸಂದರ್ಶನದ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ನೀಡಬಹುದು. ಪತ್ರ ನೀಡಿದ ಒಂದು ವಾರದೊಳಗೆ ಅವರನ್ನು ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಇನ್ನಷ್ಟು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಂದ ಮತ್ತು ವೈದ್ಯರಿಂದ ಸಲಹೆಗಳನ್ನು ಆಹ್ವಾನಿಸುವುದಾಗಿ ಯು.ಟಿ. ಖಾದರ್ ತಿಳಿಸಿದ್ದಾರೆ.






