ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜುರನ್ನು ಭೇಟಿಯಾದ ಯು.ಟಿ.ಖಾದರ್

ಬೆಂಗಳೂರು : ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ಶುಕ್ರವಾರ ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಇಲಾಖೆಗೆ ಸಂಬಂಧಿಸಿದ ಹಲವಾರು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿ ಮನವಿಯನ್ನು ಸಲ್ಲಿಸಿದರು.
ಜೊತೆಗೆ 2026-27ನೇ ಸಾಲಿನ ಹಜ್ ಯಾತ್ರೆಯ ವ್ಯವಸ್ಥೆಗಳ ಕುರಿತು ಚರ್ಚಿಸಿ, ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಒಟ್ಟಾರೆ ಉತ್ತಮ ವ್ಯವಸ್ಥೆ ಮಾಡಿದ್ದಕ್ಕಾಗಿ ಸಚಿವರಿಗೆ ಈ ಭೇಟಿಯ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಲಾಯಿತು.
2026-27ರಲ್ಲಿ ಯಾತ್ರಾರ್ಥಿಗಳು ಎದುರಿಸಿದ ಸ್ಮಾರ್ಟ್ ವಾಚ್, ಕೇಟರಿಂಗ್ ಸೇವೆ, ಬೆಂಗಳೂರಿನಿಂದ ದೊಡ್ಡ ವಿಮಾನಗಳ ಸೌಲಭ್ಯ (ಎ330/ಬಿ787/ಬಿ777), ಮಂಗಳೂರು ಎಂಬಾರ್ಕೇಶನ್ ಕೇಂದ್ರ ಪುನರಾರಂಭ ಹಾಗೂ ಮಕ್ಕಾದಲ್ಲಿ ವಸತಿ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳು ಕುರಿತು ವಿವರವಾದ ಪತ್ರ ನೀಡಿ ಚರ್ಚಿಸಲಾಯಿತು. ಈ ಕುರಿತು ಶೀಘ್ರವೇ ಸಭೆ ಕರೆದು ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಹಜ್ ಸಮಿತಿ ಮೂಲಕ ಉಮ್ರಾ ಯಾತ್ರೆ :
ಪ್ರತಿ ವರ್ಷ ಕರ್ನಾಟಕದಿಂದ 10 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಖಾಸಗಿ ಟೂರ್ ಆಪರೇಟರ್ ಗಳ ಮೂಲಕ ತೆರಳಿ ಅನುಭವಿಸುತ್ತಿರುವ ವಂಚನೆ ಹಾಗೂ ದುಬಾರಿ ವೆಚ್ಚವನ್ನು ತಪ್ಪಿಸಲು, ಕರ್ನಾಟಕ ರಾಜ್ಯ ಹಜ್ ಸಮಿತಿ ಮೂಲಕ ‘ಲಾಭವೂ ಇಲ್ಲ, ನಷ್ಟವೂ ಇಲ್ಲ’ ಆಧಾರದಲ್ಲಿ ಉಮ್ರಾ ಯಾತ್ರೆ ಆಯೋಜಿಸಲು ಅನುಮೋದನೆ ಕೋರಲಾಯಿತು.
ಪಿಎಂಜೆವಿಕೆ ಅಡಿ ಬಾಕಿ ಇರುವ 25 ಯೋಜನೆಗಳಿಗೆ ಅನುಮೋದನೆ :
ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮದಡಿ (ಪಿಎಂಜೆವಿಕೆ) ಅಲ್ಪಸಂಖ್ಯಾತರ ನಿರ್ದೇಶನಾಲಯದ ಬಾಕಿ ಇರುವ 294.53 ಕೋಟಿ ರೂ. ಮೊತ್ತದ 25 ಯೋಜನೆಗಳಿಗೆ (1 ಆಸ್ಪತ್ರೆ-45.50 ಕೋಟಿ ರೂ., 4 ಕೌಶಲ್ಯ ಕೇಂದ್ರಗಳು-72 ಕೋಟಿ ರೂ., 5 ವಸತಿ ಶಾಲೆಗಳು-95 ಕೋಟಿ ರೂ., 11 ವಿದ್ಯಾರ್ಥಿ ನಿಲಯಗಳು-67.40 ಕೋಟಿ ರೂ., 4 ದಿನದ ಶಾಲೆಗಳು-14.63 ಕೋಟಿ ರೂ.) ಇದಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಲಾಯಿತು. ಈ ಕುರಿತು ಅಗತ್ಯ ದಾಖಲೆಗಳನ್ನು ಅ.1ರಂದೆ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಿರುವ ಮಾಹಿತಿ ನೀಡಲಾಯಿತು.
ಪಿಎಂವಿಕಾಸ್ ಪೋರ್ಟಲ್ ಲಾಗಿನ್ ಪ್ರವೇಶ :
ಪಿಎಂ ವಿಕಾಸ್ ಯೋಜನೆಯಡಿ ಕರ್ನಾಟಕದ 5,790 ಫಲಾನುಭವಿಗಳಿಗೆ ಅನುಕೂಲವಾಗುವಂತೆ, ರಾಜ್ಯ ಚಾನಲೈಸಿಂಗ್ ಏಜೆನ್ಸಿಯಾದ ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಪೋರ್ಟಲ್ ಲಾಗಿನ್ ವಿವರಗಳನ್ನು ಶೀಘ್ರವಾಗಿ ನೀಡುವಂತೆ ಕೋರಲಾಯಿತು.
ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಸಮ್ಮೇಳನ ಮತ್ತು ಅಂತರಧರ್ಮೀಯ ಸಮ್ಮೇಳನ :
ದೇಶಾದ್ಯಂತದ 'ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಸಮ್ಮೇಳನ' ಆಯೋಜಿಸುವ ಕುರಿತು ಸಚಿವರೊಂದಿಗೆ ಸಮಾಲೋಚಿಸಲಾಯಿತು. ಇದರೊಂದಿಗೆ, ಧಾರ್ಮಿಕ ಸೌಹಾರ್ದತೆ, ಪರಸ್ಪರ ತಿಳುವಳಿಕೆ ಹಾಗೂ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸಲು ದೇಶದ ಎಲ್ಲ ರಾಜ್ಯಗಳಲ್ಲಿ ‘ಅಂತರಧರ್ಮೀಯ ಸಮ್ಮೇಳನಗಳನ್ನು' ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ಹಜ್ ಸಮಿತಿಗೆ ಕೇಂದ್ರದಿಂದ ಪ್ರಶಂಸೆ :
ಇಡೀ ದೇಶದಲ್ಲೇ ‘ಕರ್ನಾಟಕ ರಾಜ್ಯ ಹಜ್ ಸಮಿತಿ'ಯು ಅತ್ಯಂತ ದಕ್ಷತೆಯಿಂದ ಹಾಗೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಿರಣ್ ರಿಜಿಜು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಖಾನ್, ಕಾರ್ಯನಿರ್ವಹಣಾಧಿಕಾರಿ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.
ನಮ್ಮ ಎಲ್ಲ ಮನವಿಗಳು ಮತ್ತು ಪ್ರಸ್ತಾವನೆಗಳಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಮ್ರಾ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಹಜ್ ಸಮಸ್ಯೆಗಳ ಬಗ್ಗೆ ಶೀಘ್ರವೇ ಪ್ರತ್ಯೇಕ ಸಭೆ ಕರೆಯುವುದಾಗಿ ಹಾಗೂ ಪಿಎಂವಿಜೆಕೆ ಯೋಜನೆಗಳ ಕುರಿತು ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
-ಯು.ಟಿ.ಖಾದರ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ






