18 ವರ್ಷ ಮೇಲ್ಪಟ್ಟ ಅರ್ಹರು ಮತಪಟ್ಟಿಯಿಂದ ಹೊರಗುಳಿಯಬಾರದು : ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್

ವಿ.ಅನ್ಬುಕುಮಾರ್
ಬೆಂಗಳೂರು : ಎಸ್ಐಆರ್ ಪ್ರಕ್ರಿಯೆಯಲ್ಲಿ 18 ವರ್ಷ ಮೇಲ್ಪಟ್ಟ ಯಾರೊಬ್ಬ ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ಬಿಎಲ್ಒಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮತದಾರರ ನೋಂದಣಿ ವಿಶೇಷ ಅಭಿಯಾನ ನಡೆಯುತ್ತಿರುವ ಅಂಗವಾಗಿ ರವಿವಾರ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್ ಬಾಲ್ಡ್ ವಿನ್ ಗಲ್ರ್ಸ್ ಶಾಲೆಯ ಬೂತ್ ನಂ. 47 ಮತ್ತು 48ಕ್ಕೆ ಹಾಗೂ ಅಗರಂ ವಾರ್ಡ್ನ ಸರಕಾರಿ ತಮಿಳು ಮತ್ತು ಆಂಗ್ಲ ಪ್ರೌಢಶಾಲೆಯ ಮತದಾರರ ವಿಚಾರಣೆ ಕೇಂದ್ರಕ್ಕೆ ಭೇಟಿ ನೀಡಿ, ಎಸ್ಐಆರ್ ಕಾರ್ಯದ ನೋಟಿಸ್ಗಳ ವಿಚಾರಣೆ ಹಾಗೂ ನಮೂನೆ-6 ವಿತರಣೆ, ಮತದಾರರ ನೋಂದಣಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 18 ವಯಸ್ಸು ಮೇಲ್ಪಟ್ಟ ಯಾರೊಬ್ಬ ಅರ್ಹ ಮತದಾರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯ ನಿರ್ವಹಿಸಲು ಬಿ.ಎಲ್ಒಗಳಿಗೆ ತಿಳಿಸಿದರು.
ಪ್ರತಿಯೊಬ್ಬ ಮತದಾರರು ಈ ದೇಶದ ಅತ್ಯಮೂಲ್ಯ ಆಸ್ತಿ. ಸರಕಾರದ ವಿವಿಧ ಸೌಲಭ್ಯ ಪಡೆಯಲು, ಮತದಾನ ಮಾಡಲು ಮತದಾರರ ಚೀಟಿ ಅಗತ್ಯವಿದ್ದು, ಅದನ್ನು ಪಡೆಯಲು ಅರ್ಹತೆ ಹೊಂದಿದ ಪ್ರತಿಯೊಬ್ಬರೂ ಹಕ್ಕು ಹೊಂದಿರುತ್ತಾರೆ ಹಾಗೂ ಅರ್ಹರನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕಾಗಿರುವುದು ಎಸ್ಐಆರ್ ಪ್ರಕ್ರಿಯೆಯ ಉದ್ದೇಶವಾಗಿದೆ ಎಂದು ವಿ.ಅನ್ಬುಕುಮಾರ್ ತಿಳಿಸಿದರು.
ನಂತರ, ತಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಮತದಾರರ ವಿಚಾರಣೆ ಕೇಂದ್ರಕ್ಕೆ ಆಗಮಿಸಿದ್ದ ಹಲವು ಸಾರ್ವಜನಿಕರಿಗೆ ವಿ.ಅನ್ಬುಕುಮಾರ್ ನಮೂನೆ-6 ಅರ್ಜಿಗಳನ್ನು ವಿತರಣೆ ಮಾಡಿದರು ಹಾಗೂ ಅರ್ಜಿಗಳನ್ನು ಭರ್ತಿ ಮಾಡಲು ಸಂದೇಹಗಳಿದ್ದಲ್ಲಿ ಅವರಿಗೆ ಸಹಾಯ ಮಾಡಲು ಸ್ಥಳದಲ್ಲಿದ್ದ ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ್, ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ, ಕಂದಾಯ ಅಪರ ಆಯುಕ್ತೆ ಲಕ್ಷ್ಮಮ್ಮ, ಜಂಟಿ ಆಯುಕ್ತರಾದ ರಂಗನಾಥ್ ಕೆ. ಹಾಗೂ ಹೇಮಂತ್ ಶರಣ್, ಕಂದಾಯ ಅಧಿಕಾರಿ ವಿಭಾ ರಾಠೋಡ್ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಹಾಜರಿದ್ದರು.






