ವಾಲ್ಮೀಕಿ ನಿಗಮ ಹಗರಣ | ಹೊಸದಾಗಿ ಎರಡು ಅಕ್ರಮಗಳನ್ನು ಪತ್ತೆಹಚ್ಚಿರುವ ಸಿಬಿಐ : ಹೈಕೋರ್ಟ್ ಗೆ ಮಾಹಿತಿ

ಕರ್ನಾಟಕ ಹೈಕೋರ್ಟ್ (Photo: PTI)
ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಮತ್ತೆ ಹೊಸದಾಗಿ ಎರಡು ಅಕ್ರಮಗಳನ್ನು ಪತ್ತೆಹಚ್ಚಿರುವ ಬಗ್ಗೆ ಹೈಕೋರ್ಟ್ ಗೆ ಸಿಬಿಐ ಮಾಹಿತಿ ನೀಡಿದೆ.
ಇಂದಿನ ವಿಚಾರಣೆ ವೇಳೆ ಸಿಬಿಐ ಪರ ವಕೀಲರಾದ ಪ್ರಸನ್ನ ಕುಮಾರ್ ಹೈಕೋರ್ಟ್ ಗೆ ಹಾಜರಾಗಿ ತನಿಖಾ ವರದಿಯನ್ನು ಸಲ್ಲಿಸಿದರು.
ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನಿಂದ 95 ಲಕ್ಷ ರೂ., ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ 2.17 ಕೋಟಿ ರೂ. ಹಣ ವರ್ಗಾವಣೆಯಾಗಿದ್ದು, ವಾಲ್ಮೀಕಿ ನಿಗಮದ ಮೂಲಕ ಆರೋಪಿ ನೆಕ್ಕಂಟಿ ನಾಗರಾಜ್ ಗೆ ವರ್ಗಾವಣೆ ಮಾಡಿಸಿದ್ದಾರೆ ಎಂದು ಪ್ರಸನ್ನ ಕುಮಾರ್ ಹೈಕೋರ್ಟ್ ಗೆ ತಿಳಿಸಿದರು.
ವರದಿ ದಾಖಲಿಸಿಕೊಂಡ ಹೈಕೋರ್ಟ್, ಫೋರೆನ್ಸಿಕ್ ದಾಖಲೆ ವರ್ಗಾವಣೆಗೆ ಇತರೆ ತನಿಖಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಅಲ್ಲದೆ, ಸಿಐಡಿ, ಈಡಿ, ಸಿಎಫ್ಎಸ್ಎಲ್, ಎಸ್ಎಫ್ಎಸ್ಎಲ್ ಗೂ ಹೈಕೋರ್ಟ್ ಸೂಚನೆ ನೀಡಿದ್ದು, ಸರಕಾರಿ ನೌಕರರು, ಖಾಸಗಿ ವ್ಯಕ್ತಿಗಳ ತನಿಖೆಗೆ ಹೈಕೋರ್ಟ್ ಆದೇಶಿದೆ.
ತನಿಖೆ ಮುಂದುವರಿಸಿ ಆರೋಪಪಟ್ಟಿ ದಾಖಲಿಸಲು ಅನುಮತಿ ನೀಡಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶಿದೆ.





