ಇಂದು ಕನ್ನಡ ಸಾಹಿತ್ಯದ ಸಂಶೋಧನೆ ಹಿಂದೆ ಬಿದ್ದಿದೆ: ಎಂ.ವೀರಪ್ಪ ಮೊಯ್ಲಿ

ಬೆಂಗಳೂರು : ಇಂದು ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ ವಿಪುಲವಾಗಿದ್ದರೂ, ಕನ್ನಡ ಭಾಷೆ ಮತ್ತು ಸಾಹಿತ್ಯದ ಸಂಶೋಧನೆ ಹಿಂದೆ ಬಿದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಇಲ್ಲಿನ ಕಸಾಪ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ’ ಆಯೋಜಿಸಿದ್ದ ಸಾಹಿತ್ಯ ಪರಿಷತ್ತಿನ 111ನೆಯ ಸಂಸ್ಥಾಪನಾ ದಿನಾಚರಣೆ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇತ್ತೀಚೆಗೆ ಕನ್ನಡ ಸಾಹಿತ್ಯದಲ್ಲಿ ಹೊಸ ಹೊಸ ಕೃತಿಗಳು ಬರುತ್ತಿದ್ದರೂ, ಸಂಶೋಧನಾ ಕೃತಿಗಳು ರಚನೆಯಾಗುತ್ತಿಲ್ಲ ಎಂದರು.
ಸಾಹಿತಿ ಗೋವಿಂದ ಪೈಯವರು ಕನ್ನಡ ಬೆಳೆಯಲು ಹೊಸ ಶಬ್ದಗಳು ನಿರಂತರವಾಗಿ ಸೇರಬೇಕು ಎಂದಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಿಘಂಟಿನ ಮೂಲಕ ಆ ಕೆಲಸವನ್ನು ಮಾಡುತ್ತಾ ಬಂದಿದೆ. ಅದು ಮುಂದುವರೆಯಬೇಕು. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತು ಪ್ರವಾಸಿ ತಾಣವಾಗಬೇಕು ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದ್ದೇ ಮೊದಲನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಪರಿಷತ್ತು ಅಲ್ಲಿಂದ ನಿರಂತರವಾಗಿ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತಾ ಬಂದಿದೆ. ರಾಜ್ಯದ ಏಕೀಕರಣ ಮತ್ತು ನಾಮಕರಣಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನೀಡಿದ ಕೊಡುಗೆ ಅಪಾರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು 110 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿರುವುದೇ ಬಹುದೊಡ್ಡ ಹೆಗ್ಗಳಿಕೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರಿನ ಸ.ರ.ಸುದರ್ಶನ ಅವರಿಗೆ ‘ಕನ್ನಡ ಚಳುವಳಿ ವೀರಸೇನಾನಿ ಮ.ರಾಮಮೂರ್ತಿ’ ದತ್ತಿ ಪುರಸ್ಕಾರ, ದಕ್ಷಿಣ ಕನ್ನಡದ ಎಚ್.ಶಕುಂತಲಾ ಭಟ್ ಮತ್ತು ತುಮಕೂರಿನ ವಿಜಯ ಮೋಹನ್ ಅವರಿಗೆ ‘ಪದ್ಮಭೂಷಣ ಡಾ.ಬಿ.ಸರೋಜ ದೇವಿ ದತ್ತಿ ಪುರಸ್ಕಾರ’, ಬೆಂಗಳೂರಿನ ಗುರುದೇವ ನಾರಾಯಣ ಕುಮಾರ್ ಮತ್ತು ಶಿವಮೊಗ್ಗದ ಡಿ.ಬಿ.ರಜಿಯಾ ಅವರಿಗೆ ‘ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿ ದತ್ತಿ ಪುರಸ್ಕಾರ’ ಮತ್ತು ಧಾರವಾಡದ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮಿಗಳಿಗೆ ‘ಡಾ.ಎಚ್.ವಿಶ್ವನಾಥ್ ಮತ್ತು ಎಂ.ಎಸ್.ದತ್ತಿ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರೂಪಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜ್, ನೇ.ಭ.ರಾಮಲಿಂಗ ಶೆಟ್ಟಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.







